Commonwealth Games 2022- ಲಾಂಗ್ ಜಂಪ್ ನಲ್ಲಿ ಮುರಳಿ ಶ್ರೀ ಶಂಕರ್ ಗೆ ಬೆಳ್ಳಿ ಗರಿ..!

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಅವರು ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ.
ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿರುವ ಮುರಳಿ ಶ್ರೀಶಂಕರ್ ತನ್ನ ನೈಜ ಪ್ರದರ್ಶನವನ್ನು ನೀಡಲು ವಿಫಲರಾದ್ರು. ಒಂದು ವೇಳೆ ನೈಜ ಪ್ರದರ್ಶನ ನೀಡುತ್ತಿದ್ರೆ ಅವರು ಚಿನ್ನದ ಪದಕ ಗೆಲ್ಲುತ್ತಿದ್ದರು.
ಹಾಗೇ ನೋಡಿದ್ರೆ ಮುರಳಿ ಶ್ರೀ ಶಂಕರ್ ಅವರು ಲಾಂಗ್ ಜಂಪ್ ನಲ್ಲಿ 8.36 ಮೀಟರ್ ದೂರ ಜಿಗಿದು ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು. ಆದ್ರೆ ಬರ್ಮಿಂಗ್ ಹ್ಯಾಮ್ ನಲ್ಲಿ ಅವರು ಜಿಗಿದಿದ್ದು 8.08 ಮೀಟರ್ ಮಾತ್ರ. ಅದು ಕೂಡ ಐದನೇ ಪ್ರಯತ್ನದಲ್ಲಿ. ಇನ್ನುಳಿದಂತೆ ಬಹಮಾಸ್ ಲಕ್ವಾನ್ ನೈರ್ನ್ ಚಿನ್ನದ ಪದಕ ಗೆದ್ದುಕೊಂಡ್ರೆ, ದಕ್ಷಿಣ ಆಫ್ರಿಕಾದ ಜೊವಾನ್ ವಾನ್ ವುರೆನ್ ಅವರು ಕಂಚಿನ ಪದಕ ಗೆದ್ದುಕೊಂಡ್ರು.
ಇನ್ನು ಭಾರತದ ಮಹಮ್ಮದ್ ಅನೀಸ್ ಯತಿಯಾ ಅವರು 7.97 ಮೀಟರ್ ದೂರ ಜಿಗಿದು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮುರಳಿ ಶ್ರೀ ಶಂಕರ್ ಅವರು ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಮದೆ 1978ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸುರೇಶ್ ಬಾಬು ಕಂಚಿನ ಪದಕ ಗೆದ್ರೆ, ಮಹಿಳೆಯರ ವಿಭಾಗದಲ್ಲಿ 2010ರ ಡೆಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪ್ರಜುಶಾ ಮಲೈಕಲ್ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಹಾಗೇ 2002ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಅಂಜು ಬಾಬಿ ಜಾರ್ಜ್ ಅವರು ಕಂಚು ಗೆದ್ದಿದ್ದರು.
ಅಂದ ಹಾಗೇ ಮುರಳಿ ಶ್ರೀ ಶಂಕರ್ ಅವರಿಗೆ ಮಹತ್ವದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಸಿಕ್ಕಿರುವುದು ಇದು ಮೊದಲ ಬಾರಿ. ಈ ಹಿಂದೆ 20 ವಯೋಮಿತಿ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಗೆದ್ದುಕೊಂಡಿದ್ದರು.
ಹಾಗೇ ಇತ್ತೀಚೆಗೆ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲೂ ಮುರಳಿ ಶ್ರೀ ಶಂಕರ್ ಅವರು ನಿರಾಸೆ ಅನುಭವಿಸಿದ್ದರು.
ಒಟ್ಟಿನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವುದು ಶ್ರೀಶಂಕರ್ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.