ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 15ನೇ ಸೀಸನ್ನಲ್ಲಿ ಮತ್ತೆ ಮುಖಾಮುಖಿಯಾಗುತ್ತಿವೆ. ಮೊದಲ ಬಾರಿ ಚೆನ್ನೈ ತಂಡವನ್ನು ಎದುರಿಸಿದ್ದಾಗ ಪಂಜಾಬ್ ಗೆದ್ದು ಬೀಗಿತ್ತು. ಆದರೆ ಈಗ ಲೆಕ್ಕಾಚಾರ ಬದಲಾಗಿದೆ. ಪಂಜಾಬ್, ಚೆನ್ನೈ ತಂಡದಂತೆ ಪರದಾಟ ನಡೆಸುತ್ತಿದೆ. ಚೆನ್ನೈ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದ್ದರೆ, ಪಂಜಾಬ್ ತಂಡ 8ನೇ ಸ್ಥಾನದಲ್ಲದೆ.
ಹಿಂದಿನ ನಾಲ್ಕು ಪಂದ್ಯಗಳ ಪೈಕಿ ಚೆನ್ನೈ 2ನ್ನು ಗೆದ್ದಿದೆ. ಪಂಜಾಬ್ 1 ನ್ನು ಗೆದ್ದಿದೆ. ಚೆನ್ನೈ ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗ ಚೇತರಿಸಿಕೊಂಡಿದೆ. ಪಂಜಾಬ್ ಬ್ಯಾಟಿಂಗ್ ಅಸ್ಥಿರವಾಗಿದೆ. ಚೆನ್ನೈ ತಂಡ ಪವರ್ ಪ್ಲೇ ನಲ್ಲಿ ಉತ್ತಮ ಆಟ ಆಡಿದೆ. ಕೊನೆಯ 3 ಪಂದ್ಯಗಳಲ್ಲಿ ಚೆನ್ನೈ 6.7 ಎಕಾನಮಿ ರೇಟ್ನಲ್ಲಿ ಪವರ್ ಪ್ಲೇ ನಲ್ಲೇ 9 ವಿಕೆಟ್ ಕಬಳಿಸಿದೆ. ಮತ್ತೊಂದು ಕಡೆಯಲ್ಲಿ ಪಂಜಾಬ್ ತಂಡದ ಪವರ್ ಪ್ಲೇ ರನ್ ರೇಟ್ 9.52 ರಷ್ಟಿದೆ.
ಮಯಾಂಕ್ ಮತ್ತು ರವೀಂದ್ರ ಜಡೇಜಾ ಪಾಲಿಗೂ ಉತ್ತಮ ಇನ್ನಿಂಗ್ಸ್ ಅವಶ್ಯಕತೆ ಇದೆ. ಈ ಇಬ್ಬರು ನಾಯಕರು ಈ ಬಾರಿಯ ಐಪಿಎಲ್ನಲ್ಲಿ ಹೆಚ್ಚು ಸದ್ದು ಮಾಡಿಲ್ಲ. ಪಂಜಾಬ್ ಕಿಂಗ್ಸ್ ಕೆಲ ಬದಲಾವಣೆ ಕೂಡ ಮಾಡಬಹುದು. ವೈಫಲ್ಯ ಕಾಣುತ್ತಿರುವ ಜಾನಿ ಬೇರ್ ಸ್ಟೋವ್ ಬದಲು ಸಿಕ್ಸ್ ಹಿಟ್ಟಿಂಗ್ ಸ್ಪೆಷಲಿಸ್ಟ್ ಭಾನುಕಾ ರಾಜಪಕ್ಸೆಗೆ ಅವಕಾಶ ನೀಡಬಹುದು. ನಾಥನ್ ಎಲ್ಲೀಸ್ ಬದಲು ಓಡಿನ್ ಸ್ಮಿತ್ಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ. ಉಳಿದಂತೆ ಶಿಖರ್ ಧವನ್, ಲಿಯಂ ಲಿವಿಂಗ್ ಸ್ಟೋನ್, ಜಿತೇಶ್ ಶರ್ಮಾ ಮತ್ತು ಶಾರೂಕ್ ಖಾನ್ ಬ್ಯಾಟಿಂಗ್ ಬಲ. ಕಗಿಸೋ ರಬಾಡಾ, ರಾಹುಲ್ ಚಹರ್, ವೈಭವ್ ಅರೋರಾ ಮತ್ತು ಅರ್ಶದೀಪ್ ಸಿಂಗ್ ಬೌಲಿಂಗ್ ವಿಭಾಗದ ಬಲ.
ಚೆನ್ನೈ ತಂಡ ಹೆಚ್ಚು ಬದಲಾವಣೆ ಮಾಡಿದ ಇತಿಹಾಸವಿಲ್ಲ. ಆದರೆ ಈ ಬಾರಿ ರಿಟೈನ್ ಆದ ಪ್ಲೇಯರ್ ಮೊಯಿನ್ ಅಲಿಯನ್ನೇ ಹೊರಗಿಟ್ಟಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಓವರ್ ನಲ್ಲಿ ಪಂದ್ಯ ಗೆದ್ದ ಬಳಿಕ ತಂಡದ ಆತ್ಮವಿಶ್ವಾಸವೂ ಹೆಚ್ಚಿದೆ. ರುತುರಾಜ್ ಗಾಯಕ್ವಾಡ್ ಮತ್ತು ರಾಬಿನ್ ಉತ್ತಪ್ಪ ಇನ್ನಿಂಗ್ಸ್ ಆರಂಭಿಸಿದರೆ, ಅಂಬಟಿ ರಾಯುಡುಗೆ 3ನೇ ಕ್ರಮಾಂಕ ಸಿಕ್ಕಿದೆ. ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಪರಿಸ್ಥಿತಿ ನೋಡಿಕೊಂಡು ಕಣಕ್ಕಿಳಿಯಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ಡ್ವೈನ್ ಬ್ರಾವೋ ಮತ್ತು ಡ್ವೈನ್ ಪ್ರಿಟೋರಿಯಸ್ ಕೊನೆಯ ಕೆಲ ಓವರುಗಳಲ್ಲಿ ಪಂದ್ಯ ಬದಲಿಸ್ತಾರೆ. ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ ಬಲವನ್ನು ಎಲ್ಲಿ ಬೇಕಾದರೂ ಬಳಿಸಿಕೊಳ್ಳಬಹುದು.
ಬೌಲಿಂಗ್ನಲ್ಲಿ ಮುಖೇಶ್ ಚೌಧರಿ, ಮಹೀಶ್ ತೀಕ್ಷಣ ಹೊಸ ಚೆಂಡು ಹಂಚಿಕೊಳ್ಳಬಹುದು. ಸ್ಯಾಂಟ್ನರ್ ಮತ್ತು ಜಡೇಜಾ ಎಡಗೈ ಸ್ಪಿನ್ನರ್ ಗಳು. ಬ್ರಾವೋ ಮತ್ತು ಪ್ರಿಟೋರಿಯಸ್ ಡೆತ್ ಓವರ್ ಸ್ಪೆಷಲಿಸ್ಟ್ ಗಳು.
ವಾಂಖೆಡೆ ಪಿಚ್ ನಲ್ಲಿ ಪಂದ್ಯ ನಡೆಯುತ್ತಿದೆ. ಹೀಗಾಗಿ ಬೌಲಿಂಗ್ ಕಾಂಬಿನೇಷನ್ ಕೂಡ ಬ್ಯಾಟಿಂಗ್ನಷ್ಟೇ ಗಟ್ಟಿ ಇರಬೇಕು.