ಐಪಿಎಲ್ನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್, ಅತಿ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿದೆ. ಹೀಗಾಗಿ ಧೋನಿ ಅಂಡ್ ಟೀಂ ಎಲ್ಲೇ ಹೋದ್ರು ಫ್ಯಾನ್ಗಳು ಗ್ರ್ಯಾಂಡ್ ವೆಲ್ಕಮ್ ಕೊಡ್ತಾರೆ. ಅದೇ ರೀತಿಯಲ್ಲಿ 15ನೇ ಆವೃತ್ತಿಯ ಐಪಿಎಲ್ ಮಹಾಸಮರಕ್ಕೆ ರೆಡಿಯಾಗ್ತಿರೋ ಚೆನ್ನೈ ತಂಡಕ್ಕೆ ಸೂರತ್ನಲ್ಲಿ ಅದ್ದೂರಿ ಸ್ವಾಗತ ಲಭಿಸಿದೆ.
ಮಾ.26ರಿಂದ ಆರಂಭವಾಗಲಿರುವ ಐಪಿಎಲ್ ಪಂದ್ಯಾವಳಿಗಾಗಿ ಸಿಎಸ್ಕೆ ಭರ್ಜರಿ ತಯಾರಿ ಆರಂಭಿಸಿದೆ. ಐಪಿಎಲ್ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಅಭ್ಯಾಸ ಆರಂಭಿಸಿರುವ ಹಾಲಿ ಚಾಂಪಿಯನ್ ಧೋನಿ ಬಳಗಕ್ಕೆ ಸೂರತ್ನಲ್ಲಿ ಅಭಿಮಾನಿಗಳ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಾಕಿರುವ ವಿಡಿಯೋದಲ್ಲಿ ಧೋನಿ ಮತ್ತು ಬಳಗಕ್ಕೆ ಸೂರತ್ ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಎಂ.ಎಸ್.ಧೋನಿ, ಅಭ್ಯಾಸದಲ್ಲಿ ಪಾಲ್ಗೊಳ್ಳಲು ಮೈದಾನಕ್ಕೆ ತೆರಳುತ್ತಿರುವುದು ಕಂಡು ಬಂದಿದೆ. ಸಿಎಸ್ಕೆ ತಂಡದ ಬಸ್ ತೆರಳಿದ ರಸ್ತೆಯುದ್ದಕ್ಕೂ ನಿಂತಿದ್ದ ಅಭಿಮಾನಿಗಳು ಧೋನಿ ಹಾಗೂ ಸಿಎಸ್ಕೆ ಪರ ಜೈಕಾರ ಹಾಕುತ್ತಾ ಸಂಭ್ರಮಿಸಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ಅಭ್ಯಾಸ ಆರಂಭಿಸಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆಗೆ ಅಂಬಾಟಿ ರಾಯಡು, ಕೆ.ಎಂ.ಆಸಿಫ್ ಹಾಗೂ ಇನ್ನಿತರ ಆಟಗಾರರು ಬೌಲಿಂಗ್ ಕೋಚ್ ಎಲ್. ಬಾಲಾಜಿ ಅವರ ನೇತೃತ್ವದಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಮಾ.26ರಿಂದ ಆರಂಭವಾಗಲಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಂಬೈನಾ ವಾಂಖೆಡೆ ಅಂಗಳದಲ್ಲಿ ಮುಖಾಮುಖಿಯಾಗಲಿವೆ.