15ನೇ ಆವೃತ್ತಿಯ ಐಪಿಎಲ್ಗೆ ಭರ್ಜರಿ ಆರಂಭ ಸಿಕ್ಕಿದೆ. ಬೌಂಡರಿ, ಸಿಕ್ಸರ್ಗಳ ಲೆಕ್ಕಾಚಾರ ಶುರುವಾಗಿದೆ. ಬ್ಯಾಟ್ಸ್ಮನ್ಗಳ ಅಬ್ಬರ ಶುರುವಾಗಿದೆ. ಚೆನ್ನೈಗೆ ಮಾಜಿ ನಾಯಕ ಎಂ.ಎಸ್.ಧೋನಿ ಸ್ಪೋಟಕ ಶಕ್ತಿ ತೋರಿಸಿದರೆ ಕೆಕೆಆರ್ಗೆ ಶ್ರೇಯಸ್ ಅಯ್ಯರ್ ವೇಗದ ಆಟದ ಶಕ್ತಿ ತುಂಬಿದ್ದರು. ಮುಂಬೈಗೆ ಇಶನ್ ಕಿಶನ್ ಬೌಂಡರಿ, ಸಿಕ್ಸರ್ ಮೂಲಕ ರನ್ ಬೆಟ್ಟ ಕಟ್ಟಿ ಕೊಟ್ಟರೆ, ಅಕ್ಸರ್ ಮತ್ತು ಲಲಿತ್ ಯಾದವ್ ಡೆಲ್ಲಿ ನೆರವಿಗೆ ನಿಂತರು. ಫಾಫ್ ಡು ಪ್ಲೆಸಿಸ್ ಸಿಕ್ಸರ್ ಗಳ ಮೂಲಕ ಆರ್ಸಿಬಿಗೆ ಭದ್ರ ಬುನಾಧಿ ಹಾಕಿ ಕೊಟ್ಟರೆ, ಒಡಿನ್ ಸ್ಮಿತ್ ಮತ್ತು ಭಾನುಕಾ ರಾಜಪಕ್ಸ ಪಂಜಾಬ್ ತಂಡವನ್ನು ಗೆಲ್ಲಿಸಿ ಬಿಟ್ರು. ಹಾಗಾದರೆ ಐಪಿಎಲ್ನಲ್ಲಿ ಬೌಲರ್ಗಳಿಗೆ ಬೆಲೆ ಇಲ್ವಾ ಅನ್ನುವ ಚರ್ಚೆ ಶುರುವಾಗಿದೆ.
ಚೆನ್ನೈ ತಂಡ ಮೊದಲ ಪಂದ್ಯದಲ್ಲಿ 135ರ ಆಸುಪಾಸಿನಲ್ಲಿ 20 ಓವರುಗಳ ಕೋಟಾ ಮುಗಿಸಿತ್ತು. ವಾಂಖೆಡೆಯಲ್ಲಿ ಮಂಜು ಉದುರಲು ಶುರುವಾಗಿದ್ದು ಸಿಎಸ್ಕೆ ಬೌಲರ್ಗಳನ್ನು ಹಿಡಿತ ತಪ್ಪಿಸುತ್ತಿತ್ತು. ಆದರೆ ಪಂದ್ಯ ಬೇಗ ಮುಗಿಯುವುದು ಸಿಎಸ್ಕೆ ಬೇಕಿರಲಿಲ್ಲ. ಸೋಲು ಖಚಿತವಾದ ಮೇಲೆ ಪಂದ್ಯವನ್ನು ಎಷ್ಟು ದೂರ ಸಾಗಿಸಬಹುದು ಅನ್ನುವ ಪ್ಲಾನ್ ಮಾಡಿತ್ತು. ಹೀಗಾಗಿ ಕೆಕೆಆರ್ 18.2 ಓವರುಗಳ ತನಕ ಗೆಲುವಿಗಾಗಿ ಕಾಯಬೇಕಿತ್ತು.
ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ತೆಗೆದುಕೊಂಡರೆ, ಮುಂಬೈ ಪಂದ್ಯದ ಮುಕ್ಕಾಲು ಭಾಗ ಅಬ್ಬರಿಸಿ ಬೊಬ್ಬಿರಿದಿತ್ತು. ಅಷ್ಟೇ ಅಲ್ಲ ಸುಲಭವಾಗಿ ಪಂದ್ಯ ಗೆಲ್ಲುವ ಪ್ಲಾನ್ ಮಾಡಿತ್ತು. ಆದರೆ ಅಕ್ಸರ್, ಶಾರ್ದೂಲ್, ಪೃಥ್ವಿ ಷಾ ಮತ್ತು ಲಲಿತ್ ಯಾದವ್ ಮುಂಬೈ ಗೆಲುವಿನ ಪಾರ್ಟಿಯನ್ನು ಹಾಳು ಮಾಡಿದು. 170 ಆಸುಪಾಸಿನ ಮೊತ್ತವೂ ಸೇಫ್ ಆಗಲಿಲ್ಲ. ಡೆಲ್ಲಿ ಅಂದುಕೊಂಡಿದ್ದಕ್ಕಿಂತ ವೇಗವಾಗಿ ಪಂದ್ಯ ಮುಗಿಸಿತ್ತು.
ಆರ್ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯದ ಮಾತು ಬೇರೆಯದ್ದೇ ಇದೆ. ಆರ್ಸಿಬಿ 206 ರನ್ಗಳನ್ನು ಕಲೆಹಾಕಿದಾಗ ಅರ್ಧದಷ್ಟು ಪಂದ್ಯ ಗೆದ್ದ ನಿರಾಳತೆಯಲ್ಲಿತ್ತು. ಆದರೆ ಕ್ರಿಕೆಟ್ನಲ್ಲಿ ಕಟ್ಟ ಕಡೆಯ ಎಸೆತದವರೆಗೂ ಫಲಿತಾಂಶ ಬರುವುದಿಲ್ಲ ಅನ್ನುವ ಮಾತಿದೆ. ಅದು ನಡೆದೇ ಬಿಟ್ಟಿತು. ಪಂಜಾಬ್ ಆರ್ಸಿಬಿ ಬೌಲರ್ಗಳಿಗೆ ಸ್ವಲ್ಪವೂ ಗೌರವ ಕೊಡದ ರೀತಿಯಲ್ಲಿ ಆಡಿತು.
ಆರ್ಸಿಬಿ ಟಿ20 ಕ್ರಿಕೆಟ್ನ ನಂಬರ್ 1 ಸ್ಪಿನ್ನರ್ ಹಸರಂಗ ಡಿ ಸಿಲ್ವಾರನ್ನು ಕಣಕ್ಕಿಳಿಸಿದರೂ ಸಿಕ್ಸರ್ಗಳ ಅಬ್ಬರಕ್ಕೆ ಕಡಿವಾಣ ಹಾಕಲು ಆಗಲಿಲ್ಲ. ಮೊಹಮ್ಮದ್ ಸಿರಾಜ್ ಅನ್ನುವ ವರ್ಕ್ ಹಾರ್ಸ್ ಕೈ ಕೊಟ್ರು. ಆಕಾಶ್ ದೀಪ್ ಪ್ರಯೋಗ ಠುಸ್ ಪಟಾಕಿ ಆಯಿತು. ಪಂಜಾಬ್ ಒಂದು ಓವರ್ ಬಾಕಿ ಇರುವಾಗಲೇ 206ನ್ನು ಚೇಸ್ ಮಾಡಿ ಪಾರ್ಟಿಗೆ ಶುರು ಮಾಡಿತ್ತು.
ಬ್ಯಾಟ್ಸ್ಮನ್ಗಳು ಎಷ್ಟೇ ರನ್ ಕೂಡಿ ಹಾಕಿದರೂ ಬೌಲರ್ಗಳು ಕೈ ಕೊಟ್ಟರೆ, 206 ರನ್ ಅಲ್ಲ, 300 ರನ್ ಕೂಡ ಸೇಫ್ ಅಲ್ಲ. ಬೌಲರ್ಗಳು ಬುದ್ಧಿವಂತಿಕೆ ತೋರಿದರೆ 135-140 ರನ್ಗಳು ಬಿಗ್ ಹಿಟ್ಟಿಂಗ್ ಸ್ಪೆಷಲಿಸ್ಟ್ಗೆ ಚಾಲೆಂಜ್ ಆಗಬಹುದು ಅನ್ನುವುದು ಐಪಿಎಲ್ ಇತಿಹಾಸದಲ್ಲಿದೆ. ಮುಂದಿನ ಪಂದ್ಯಗಳಲ್ಲಾದರೂ ಟ್ರೆಂಡ್ ಬದಲಾಗುತ್ತಾ ಅನ್ನುವುದು ಈಗಿರುವ ಚರ್ಚೆ.