BCCI- ಬಿಸಿಸಿಐ ಟಫ್ ರೂಲ್ಸ್.. ಹಿರಿಯ ಆಟಗಾರರ ಕ್ರಿಕೆಟ್ ಬದುಕಿಗೆ ಮಾರಕ..!


ಹೌದು, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಸುಲಭದ ಸಂಗತಿಯಲ್ಲ. ಅದೇ ರೀತಿ ಸ್ಥಾನ ಸಿಕ್ಕಿದ್ರೂ ಅದನ್ನು ಉಳಿಸಿಕೊಳ್ಳಲು ಅಷ್ಟೇ ಪರಿಶ್ರಮ ಪಡಬೇಕು. ಯಾಕಂದ್ರೆ ಸಾಲು ಸಾಲು ಯುವ ಕ್ರಿಕೆಟಿಗರು ಟೀಮ್ ಇಂಡಿಯಾದ ಕದ ತಟ್ಟುತ್ತಿದ್ದಾರೆ. ಒಂದು ಬಾರಿ ತಂಡದಿಂದ ಹೊರಬಂದ್ರೆ ಮತ್ತೆ ತಂಡವನ್ನು ಸೇರಿಕೊಳ್ಳುವುದು ಕನಸಿನ ಮಾತು ಎಂಬಂತಿದೆ. ಅಷ್ಟೊಂದು ಸ್ಪರ್ಧೆ ಈಗ ಟೀಮ್ ಇಂಡಿಯಾ ತಂಡದಲ್ಲಿದೆ.
ಈ ನಡುವೆ, ತಂಡದ ಹಿರಿಯ ಆಟಗಾರರು ಫಾರ್ಮ್ ಕಳೆದುಕೊಂಡು ಮತ್ತೆ ತಂಡವನ್ನು ಸೇರಿಕೊಳ್ಳುತ್ತೇನೆ ಎಂಬ ನಂಬಿಕೆ ಇಲ್ಲ. ಬಿಸಿಸಿಐ ಅನುಭವ ಮತ್ತು ಹಿರಿತನ ಆಧಾರದ ಮೇಲೆತಂಡದಲ್ಲಿ ಸ್ಥಾನ ನೀಡಿದ್ರೂ ಯುವ ಕ್ರಿಕೆಟಿಗರ ಅಬ್ಬರದ ಮಂದೆ ಮಂಕಾಗಬೇಕಾಗುತ್ತದೆ.
ಅಂದ ಹಾಗೇ ಕೆಲವೊಂದು ವಿಚಾರಗಳಲ್ಲಿ ಬಿಸಿಸಿಐನ ಖಡಕ್ ನಿಯಮಗಳು ಭಾರತೀಯ ಆಟಗಾರರಿಗೆ ಕಗ್ಗಂಟಾಗಿ ಪರಿಣಮಿಸುತ್ತಿದೆ. ಬಿಸಿಸಿಐ ಕೌಂಟಿ ಕ್ರಿಕೆಟ್ ಬಿಟ್ಟು ಬೇರೆ ಯಾವುದೇ ವಿದೇಶಿ ಟೂರ್ನಿಗಳಲ್ಲಿ ಆಡಲು ಭಾರತೀಯ ಕ್ರಿಕೆಟಿಗರಿಗೆ ಅವಕಾಶ ನೀಡುತ್ತಿಲ್ಲ. ಇದರಿಂದ ಹಲವು ಕ್ರಿಕೆಟಿಗರಿಗೆ ತೊಂದರೆಯಾಗಿದೆ.
ನಿಜ, ಬಲಿಷ್ಠ ಮತ್ತು ದೂರದೃಷ್ಟಿಯಿಂದ ಟೀಮ್ ಇಂಡಿಯಾವನ್ನು ಕಟ್ಟಬೇಕು ಎಂಬುದು ಬಿಸಿಸಿಐನ ಉದ್ದೇಶ ಸ್ಪಷ್ಟವಿದೆ. ಅದಕ್ಕಾಗಿಯೇ ಯುವ ಕ್ರಿಕೆಟಿಗರಿಗೆ ಅವಕಾಶವನ್ನು ನೀಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆದ್ರೆ ಹಿರಿಯ ಕ್ರಿಕೆಟಿಗರು ಏನು ಮಾಡಬೇಕು ಎಂಬ ಪ್ರಶ್ನೆಗೆ ಬಿಸಿಸಿಐ ಬಳಿಯೂ ಉತ್ತರವಿಲ್ಲ.
ಉದಾಹರಣೆಗೆ, ಗೌತಮ್ ಗಂಭೀರ್, ಸೆಹ್ವಾಗ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯುಸೂಫ್ ಪಠಾಣ್, ಸುರೇಶ್ ರೈನಾ ಮೊದಲಾದ ಆಟಗಾರರಿಗೆ ಟೀಮ್ ಇಂಡಿಯಾಗೆ ಮತ್ತೆ ಕಮ್ ಬ್ಯಾಕ್ ಮಾಡಲು ಆಗಲಿಲ್ಲ. ಹೀಗಾಗಿ ಒಲ್ಲದ ಮನಸ್ಸಿನಿಂದಲೇ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಬೇಕಾಯ್ತು.
ಹೌದು, ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗದೇ ಇದ್ದಾಗ ಮತ್ತೆ ದೇಶಿಯ ಪಂದ್ಯಗಳನ್ನು ಆಡಬೇಕಾಗುತ್ತದೆ. ಅಲ್ಲಿ ಫಾರ್ಮ್ ಕಂಡುಕೊಂಡು ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕು ಎಂಬುದು ಭಾರತೀಯ ಕ್ರಿಕೆಟ್ ನ ಸಿದ್ಧಾಂತ. ಆದ್ರೆ ದೇಶಿ ಕ್ರಿಕೆಟ್ ನಲ್ಲೂ ಯುವ ಆಟಗಾರರಿಗೆ ಅವಕಾಶ ನೀಡಬೇಕು. ದೇಸಿ ಕ್ರಿಕೆಟ್ ನ ವಿವಿಧ ಟೂರ್ನಿಗಳಲ್ಲಿ ಆಡಿದ್ರೆ ಯುವ ಕ್ರಿಕೆಟಿಗರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಆದ್ರೆ ಇಲ್ಲೂ ಕೂಡ ಹಿರಿಯ ಕ್ರಿಕೆಟಿಗರು ತಮ್ಮ ಸ್ಥಾನಗಳನ್ನು ಯುವ ಕ್ರಿಕೆಟಿಗರಿಗೆ ಬಿಟ್ಟುಕೊಡುವುದು ಉಂಟು.

ಇನ್ನು ಐಪಿಎಲ್ ವಿಚಾರ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿ ಮಾಡಿಲ್ಲ. ಕಾರಣ, ರೈನಾ ಫಿಟ್ ಆಗಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ದೇಶಿ ಪಂದ್ಯಗಳನ್ನು ಆಡಿಲ್ಲ. ಮೇಲ್ನೋಟಕ್ಕೆ ಇದು ಕಾರಣವಾಗಿರಬಹುದು. ಆದ್ರೆ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರ ರಣಜಿ ಟೂರ್ನಿಗಳಲ್ಲಿ ಆಡಲಿಲ್ಲ. ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಕಾರಣವೂ ಇರಬಹುದು. ಇದೇ ರೀತಿಯ ಮನೋಭಾವನೆ ಬೇರೆ ಹಿರಿಯ ಆಟಗಾರರಿಗೂ ಇರುತ್ತದೆ.
ಆದ್ರೆ ಬಿಸಿಸಿಐ ಅರ್ಥಮಾಡಿಕೊಳ್ಳುತ್ತಿಲ್ಲ. ಹಿರಿಯ ಕ್ರಿಕೆಟಿಗರಿಗೆ ವಿದೇಶಿ ಟೂರ್ನಿಗಳಲ್ಲಿ ಆಡಲು ಅವಕಾಶ ನೀಡಿದ್ರೆ ಕನಿಷ್ಠ ಐಪಿಎಲ್ ನಲ್ಲಿ ಅವರ ಅನುಭವ ಯುವ ಆಟಗಾರರಿಗೆ ಸಿಗುತ್ತದೆ. ಐಪಿಎಲ್ ನಲ್ಲಿ 37 ವರ್ಷ ಮೇಲ್ಪಟ್ಟ ವಿದೇಶಿ ಆಟಗಾರರು ಆಡ್ತಾರೆ. ಆದ್ರೆ ಟೀಮ್ ಇಂಡಿಯಾದ ಹಿರಿಯ ಆಟಗಾರರಿಗೆ ಅವಕಾಶವೇ ಇಲ್ಲ.
ಒಟ್ಟಿನಲ್ಲಿ ಬಿಸಿಸಿಐ ಕನಿಷ್ಠ ಟೀಮ್ ಇಂಡಿಯಾದಲ್ಲಿ ಆಡಿ ನಂತರ ಹೊರಬಂದ ಹಿರಿಯ ಆಟಗಾರರಿಗೆ ವಿದೇಶಿ ಟೂರ್ನಿಗಳಲ್ಲಿ ಆಡುವ ಅವಕಾಶ ಕಲ್ಪಿಸಿಕೊಡಬೇಕು. ಈ ವಿಚಾರವಾಗಿ ಇರ್ಫಾನ್ ಪಠಾಣ್ ಮತ್ತು ಸುರೇಶ್ ರೈನಾ ಬಿಸಿಸಿಐ ಮೇಲೆ ಮನವಿ ಕೂಡ ಮಾಡಿಕೊಂಡಿದ್ದಾರೆ. ಆದ್ರೆ ಬಿಸಿಸಿಐ ಮಾತ್ರ ತಮ್ಮ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. BCCI Tough Rules
ಇನ್ನೊಂದು ವಿಚಾರ ಅಂದ್ರೆ ವಿದೇಶಿ ಆಟಗಾರರು ನಮ್ಮ ಐಪಿಎಲ್ ಟೂರ್ನಿಯಲ್ಲಿ ಆಡಬಹುದು. ಆದ್ರೆ ನಮ್ಮ ಆಟಗಾರರು ಬಿಗ್ ಬ್ಯಾಷ್ ಸೇರಿದಂತೆ ವಿದೇಶಿ ಲೀಗ್ ಟೂನಿಗಳಲ್ಲಿ ಆಡುವಂತಿಲ್ಲ. ಇದ್ಯಾವೋ ನ್ಯಾಯವೋ ಅಂತ ಗೊತ್ತಾಗುತ್ತಿಲ್ಲ. ಅಷ್ಟಕ್ಕೂ ಬಿಸಿಸಿಐ ಅನ್ನು ಪ್ರಶ್ನೆ ಮಾಡುವ ಧೈರ್ಯ ಇಡೀ ಕ್ರಿಕೆಟ್ ಜಗತ್ತಿಗೆ ಇಲ್ಲ. ಹಾಗಾಗಿ ಇದಕ್ಕೆ ಉತ್ತರವೂ ಸಿಗಲ್ಲ.