ಐಪಿಎಲ್ನಿಂದ ಬಿಸಿಸಿಐ ದುಡ್ಡಿನ ಪರ್ವತವನ್ನು ಕಟ್ಟುತ್ತಿದೆ ಅನ್ನುವ ಮಾತಿದೆ. ಈಗ ಅದು ನಿಜವಾಗುವ ಸಾಧ್ಯತೆ ಹೆಚ್ಚಿದೆ. ಈ ಬಾರಿಯ ಐಪಿಎಲ್ ಬಳಿಕ ಮುಂದಿನ 5 ವರ್ಷಗಳ ಮಾಧ್ಯಮ ಹಕ್ಕು ಅಥವಾ ಐಪಿಎಲ್ ಮೀಡಿಯಾ ರೈಟ್ ಖರೀದಿಸಲು ಪೈಪೋಟಿ ಹೆಚ್ಚುತ್ತಿದೆ. ಬಿಸಿಸಿಐ ಮೀಡಿಯಾ ರೈಟ್ಸ್ ಅನ್ನು ಜೂನ್ 12 ರಂದು ಹರಾಜು ಮಾಡುವ ಸಾಧ್ಯತೆ ಇದೆ.
2023 ರಿಂದ 2027ರ ತನಕ ನಡೆಯುವ ಐಪಿಎಲ್ ಪಂದ್ಯಗಳ ಮಾಧ್ಯಮ ಹಕ್ಕು ಇದಾಗಿರಲಿದೆ. ಒಂದು ಅಂದಾಜಿನ ಪ್ರಕಾರ ಬಿಸಿಸಿಐ 5 ವರ್ಷಗಳ ಮೀಡಿಯಾ ರೈಟ್ಸ್ಗೆ 35,000 ಕೋಟಿ ಮೂಲ ಬೆಲೆ ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಬಿಸಿಸಿಐ ಬಂಪರ್ ಮೊತ್ತ ಸಂಗ್ರಹಿಸಲಿದೆ ಎಂದು ಲೆಕ್ಕಾಚಾರ ನಡೆಯುತ್ತಿದೆ.
ಬಿಸಿಸಿಐ ಮಾಧ್ಯಮ ಹಕ್ಕು ವಿತರಣೆ ಮೂಲಕ 45,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬಿಸಿಸಿಐ ನಿರೀಕ್ಷೆ ಮಾಡುತ್ತಿದೆ. ಟಿವಿ, ಡಿಜಿಟಲ್ ಹಕ್ಕು ಸೇರಿದಂತೆ 4 ವಿಭಾಗಗಳಲ್ಲಿ ನಡೆಸುವ ಸಾಧ್ಯತೆ ಇದೆ. ಅಲ್ಲದೇ, ಕೇವಲ ಒಂದೇ ಸಂಸ್ಥೆಗೆ ಮಾಧ್ಯಮ ಹಕ್ಕು ನೀಡುವ ಬದಲು ವಿವಿಧ ಕಂಪೆನಿಗಳಿಗೂ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು 2018ರಲ್ಲಿ ಸ್ಟಾರ್ ಇಂಡಿಯಾ 16,347.5 ಕೋಟಿ ರುಪಾಯಿಗೆ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದರ ಅವಧಿ 2022 ಐಪಿಎಲ್‌ಗೆ ಮುಕ್ತಾಯಗೊಳ್ಳಲಿದೆ.
ಸದ್ಯ ಚಾಲ್ತಿಯಲ್ಲಿರುವ ಒಪ್ಪಂದವು 2018-2022ರ ವರೆಗಿನದ್ದಾಗಿದ್ದು ಮಾಧ್ಯಮ ಹಕ್ಕು ಹೊಂದಿರುವ ಸ್ಟಾರ್ ಸಂಸ್ಥೆಯು ಬಿಸಿಸಿಐಗೆ 5 ವರ್ಷಕ್ಕೆ 16347.5 ಕೋಟಿ ರು. ಪಾವತಿಸುತ್ತಿದೆ. ಪ್ರತಿಷ್ಠಿತ ಸಂಸ್ಥೆಯೊಂದು ಸಮೀಕ್ಷೆ ನಡೆಸಿ, ಈಗ ಗಳಿಸುತ್ತಿರುವ ಹಣಕ್ಕಿಂತ ದುಪ್ಪಟ್ಟು ಗಳಿಸಬಹುದು ಎಂದು ವರದಿ ನೀಡಿದೆ. 2 ಹೊಸ ತಂಡಗಳ ಸೇರ್ಪಡೆಯಿಂದ ಒಟ್ಟು ಪಂದ್ಯಗಳ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಜೊತೆಗೆ ವೀಕ್ಷಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಕಾರಣ, ಮಾಧ್ಯಮ ಹಕ್ಕಿನ ಮೊತ್ತವೂ ದುಪ್ಪಟ್ಟಾಗಲಿದೆ ಎನ್ನಲಾಗಿದೆ.
ಕೆಲವು ಲೆಕ್ಕಾಚಾರದ ಪ್ರಕಾರ ಬಿಸಿಸಿಐ ಮೀಡಿಯಾ ರೈಟ್ಸ್ 45000 ಕೋಟಿ ರೂಪಾಯಿ ದಾಟಬಹುದು. ಪೈಪೋಟಿ ಹೆಚ್ಚಾದರೆ 50,000 ಕೋಟಿ ದಾಟುವ ಸಾಧ್ಯತೆಯೂ ಇಲ್ಲದ್ದಿಲ್ಲ. ಈಗಾಗಲೇ ಸ್ಟಾರ್, ಸೋನಿ ಜೊತೆ ರಿಲಯನ್ಸ್ ಮತ್ತು ಅಮೆಜಾನ್ ಪೈಪೋಟಿಗಿಳಿದಿವೆ. ಈ ಪೈಪೋಟಿಯಲ್ಲಿ ಲಾಭ ಮಾಡಿಕೊಳ್ಳುತ್ತಿರುವುದು ಬಿಸಿಸಿಐ.