BCCI- ICC- ಟಿ-20 ಲೀಗ್ ನಿಂದ ದ್ವಿಪಕ್ಷೀಯ ಸರಣಿ ಕಥೆ ಮುಗಿತಾ ?

ಮುಂದಿನ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ಟಿ-20 ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯು ಆಸ್ಟ್ರೇಲಿಯಾ ವಿರುದ್ದದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ರದ್ದುಗೊಳಿಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಏಕದಿನ ಸರಣಿಯ ವೇಳಾಪಟ್ಟಿಯನ್ನು ಬದಲಾವಣೆ ಮಾಡುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ಮನವಿ ಸಲ್ಲಿಸಿತ್ತು. ಆದ್ರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಒಪ್ಪಿಕೊಳ್ಳುತ್ತಿಲ್ಲ. ಈ ನಡುವೆ, ಈ ಸರಣಿ ರದ್ದುಗೊಂಡ್ರೆ ಮುಂಬರುವ ಏಕದಿನ ವಿಶ್ವಕಪ್ ನಲ್ಲಿ ಆಡುವ ಅವಕಾಶವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಕಳೆದುಕೊಳ್ಳುವ ಸಾಧ್ಯತೆ ಇದೆ.
ಆದ್ರೆ ತನ್ನ ನೆಲದಲ್ಲಿ ನಡೆಯುವ ಟಿ-20 ಲೀಗ್ ಕ್ರಿಕೆಟ್ ಗಾಗಿ ಸರಣಿಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿಯಾಗುತ್ತದೆ.
ಹೌದು, ಟಿ-20 ಕ್ರಿಕೆಟ್ ನಿಂದಾಗಿ ಈಗಾಗಲೇ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಹೊಡಿಬಡಿ ಆಟವನ್ನು ಪರವಶ ಮಾಡಿಕೊಳ್ಳುತ್ತಿರುವ ಯುವ ಆಟಗಾರರು ಕ್ರಿಕೆಟ್ ನ ಸಾಂಪ್ರದಾಯವನ್ನು ಮರೆಯುತ್ತಿದ್ದಾರೆ.
ಅದೇನೇ ಇರಲಿ, ಆದ್ರೆ ಟಿ-20 ಕ್ರಿಕೆಟ್ ಲೀಗ್ ನಿಂದಾಗಿ ಇದೀಗ ದ್ವಿಪಕ್ಷೀಯ ಸರಣಿಗಳ ಮೇಲೂ ಪರಿಣಾಮ ಬೀರುತ್ತಿದೆ.
ಈಗಾಗಲೇ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್, ವೆಸ್ಟ್ ಇಂಡೀಸ್ ನಲ್ಲಿ ಸಿಪಿಎಲ್, ಬಾಂಗ್ಲಾದಲ್ಲಿ ಬಿಪಿಎಲ್, ಲಂಕಾದಲ್ಲಿ ಎಸ್ ಪಿಎಲ್, ಪಾಕಿಸ್ತಾನದಲ್ಲಿ ಪಿಎಸ್ ಎಲ್ ಟೂರ್ನಿಗಳು ನಡೆಯುತ್ತಿವೆ. ಅದರ ಜೊತೆಗೆ ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿ ಬೆಳೆಯುತ್ತಿದೆ.
ನಿಜ, ಐಪಿಎಲ್ ನಿಂದಾಗಿ ಬಿಸಿಸಿಐ ಮತ್ತು ದೇಸಿ ಹಾಗೂ ವಿದೇಶಿ ಆಟಗಾರರ ಜೊತೆಗೆ ಕ್ರಿಕೆಟ್ ಮಂಡಳಿಗಳಿಗೂ ಲಾಭವಿದೆ. ಐಪಿಎಲ್ ಟೂರ್ನಿಯ ನೇರ ಪ್ರಸಾರ ಹಕ್ಕು ಕೋಟಿ ಕೋಟಿ ಲೆಕ್ಕದಲ್ಲಿ ದುಡ್ಡು ಹರಿದು ಬರುತ್ತಿದೆ.
ಈ ನಡುವೆ, ಮುಂದಿನ ವರ್ಷದಿಂದ ಯುಎಇನಲ್ಲೂ ಇಂಟರ್ ನ್ಯಾಷನಲ್ ಕ್ರಿಕೆಟ್ ಟೂರ್ನಿಗೂ ಚಾಲನೆ ಸಿಗಲಿದೆ. ಸಿಪಿಎಲ್ ಟಿ-10 ಟೂರ್ನಿಯಾಗಿ ಬದಲಾಗುತ್ತಿದೆ. ಇದೆಲ್ಲದರ ನಡುವೆ ಆಟಗಾರರಿಗೆ ದ್ವಿಪಕ್ಷೀಯ ಸರಣಿಯನ್ನಾಡಲು ಸಮಯವೇ ಸಿಗುವುದಿಲ್ಲ.
ಜುಲೈ ಕೊನೆಯ ವಾರದಲ್ಲಿ ಬರ್ಮಿಂಗ್ ಹ್ಯಾಮ್ ನಲ್ಲಿ ಐಸಿಸಿ ಸಭೆ ಕೂಡ ನಡೆಯಲಿದೆ.ಈ ಸಭೆಯಲ್ಲಿ ಮುಂದಿನ ಸರಣಿಗಳ ವೇಳಾಪಟ್ಟಿ ಕೂಡ ನಿಗದಿಯಾಗಲಿದೆ.
ಅಂದ ಹಾಗೇ ಈ ಬಾರಿಯ ಐಸಿಸಿ ಸಭೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಐಸಿಸಿ ಟೂರ್ನಿಗಳ ಜೊತೆಗೆ ದ್ವಿಪಕ್ಷೀಯ ಸರಣಿ, ತ್ರಿಕೋನ ಸರಣಿ, ಟೆಸ್ಟ್ ಚಾಂಪಿಯನ್ ಷಿಷ್ ಗಳಿಗೆ ಅವಕಾಶವನ್ನು ನೀಡಬೇಕು.
ಇದರ ಜೊತೆಗೆ ಐಪಿಎಲ್, ಬಿಬಿಎಲ್, ಸಿಪಿಎಲ್ ನಂತಹ ಟೂರ್ನಿಗೂ ಅವಕಾಶ ನೀಡಬೇಕು. ಈಗಾಗಲೇ ಬಿಸಿಸಿಐ ಐಪಿಎಲ್ ಗೆ 10 ವಾರಗಳ ಅವಕಾಶ ನೀಡಬೇಕು ಎಂದು ಐಸಿಸಿ ಬಳಿ ಮನವಿ ಮಾಡಿಕೊಂಡಿದೆ.

ಹಾಗೇ ಬಿಸಿಸಿಐನ ಮನವಿಯನ್ನು ಐಸಿಸಿಗೆ ತಿರಸ್ಕರಿಸುವಂತಿಲ್ಲ. ಐಸಿಸಿ ಮತ್ತು ಬೇರೆ ಬೇರೆ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳಿಗೆ ದುಡ್ಡು ಹರಿದುಬೇಕಾದ್ರೆ ಬಿಸಿಸಿಐ ಬೇಕೇ ಬೇಕು. ಟೀಮ್ ಇಂಡಿಯಾ ಆಡಲೇಬೇಕು.
ಒಂದು ವೇಳೆ ಐಸಿಸಿ ಐಪಿಎಲ್ ಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ರೆ ಇನ್ನುಳಿದ ಕ್ರಿಕೆಟ್ ಮಂಡಳಿಗಳ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ.
ಒಟ್ಟಿನಲ್ಲಿ ಟಿ-20 ಲೀಗ್ ಗಳಿಂದ ಮುಂಬರುವ ದಿನಗಳಲ್ಲಿ ದ್ವಿಪಕ್ಷೀಯ ಸರಣಿಗಳು ಅಂತ್ಯಗೊಳ್ಳುವ ಭೀತಿಯೂ ಇದೆ.
ಅಚ್ಚರಿ ಅಂದ್ರೆ, ದ್ವೀಪಕ್ಷಿಯ ಸರಣಿಗಳಿಂದ ಕ್ರಿಕೆಟ್ ಮಂಡಳಿಗೂ ಹೆಚ್ಚಿನ ಆದಾಯವಿಲ್ಲ. ಆದ್ರೆ ಟೀಮ್ ಇಂಡಿಯಾ ಆಡಿದ್ರೆ ಮಾತ್ರ ಲಾಭ. ಹೀಗಾಗಿ ಪ್ರತಿಯೊಂದು ಕ್ರಿಕೆಟ್ ಮಂಡಳಿಗಳು ಟೀಮ್ ಇಂಡಿಯಾದ ಜೊತೆ ಆಡಿ ತಮ್ಮ ಬೊಕ್ಕಸವನ್ನು ತುಂಬಿಕೊಳ್ಳುತ್ತವೆ.
ಒಟ್ಟಿನಲ್ಲಿ ಆಟಗಾರರಿಗೆ ಸಂಭಾವಣೆ, ಭತ್ಯ ಕೊಡಲು ಪರದಾಟ ನಡೆಸುತ್ತಿದ್ದ ಬಿಸಿಸಿಐ ಇಂದು ಇಡೀ ಕ್ರಿಕೆಟ್ ಜಗತ್ತನ್ನೇ ತನ್ನ ಕೈ ಬೆರಳಿನಲ್ಲಿ ಆಟ ಆಡಿಸುತ್ತಿದೆ.