ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡ ಮೊದಲ ತಂಡವಾಗಿ ಹೊರ ಬಿದ್ದಿದೆ. 9 ರನ್ಗಳ ರೋಚಕ ಜಯ ಸಾಧಿಸಿದ ಬಾಂಗ್ಲಾದೇಶ ಸೆಮಿಫೈನಲ್ ಆಸೆಯನ್ನು ಜೀವಂತ ಇಟ್ಟುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ಗಳಿಸಿತು. ಬಾಂಗ್ಲಾ ತಂಡಕ್ಕೆ ಶರ್ಮಿನ್ ಅಕ್ತರ್ (44), ಫರ್ಗಾನಾ ಹಕ್ (71) ಮತ್ತು ನಿಗರ್ ಸುಲ್ತಾನಾ (46) ರನ್ಗಳ ನೆರವಿನಿಂದ ಪೈಪೋಟಿಯ ಮೊತ್ತ ಕಲೆ ಹಾಕಿತು. ಪಾಕಿಸ್ತಾನ ಪರ ನಶ್ರಾ ಸಂಧು 3 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು. ನಹಿದಾ ಖಾನ್ (43), ಸಿದ್ರ ಅಮೀನ್ (104) ಮತ್ತು ನಾಯಕಿ ಬಿಸ್ಮಾ ಮರೂಫ್ (31) ನೆರವಿನಿಂದ ಉತ್ತಮ ಆರಂಭ ಪಡೆಯಿತು. ಆದರೆ ಒಮೈಮಾ ಸೊಹೈಲ್ (10), ನಿದಾ ದಾರ್ (0), ಆಲಿಯಾ ರಿಯಾಝ್ (0), ಫಾತಿಮಾ ಸನಾ (0), ಸಿದ್ರಾ ನವಾಜ್ (1) ವಿಕೆಟ್ ಗಳನ್ನು ಪಟಪಟನೆ ಕಳೆದುಕೊಂಡು ಒತ್ತಡಕ್ಕೆ ಬಿತ್ತು.
ಕುಸಿತದ ಮಧ್ಯೆ ಅಮೀನ್ ಶತಕ ಸಿಡಿಸಿ ಮಿಂಚಿದರು. ಅಮೀನ್ ಔಟಾಗುವುದರೊಂದಿಗೆ ಪಾಕಿಸ್ತಾನ 50 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 225 ರನ್ಗಳಿಸಲಷ್ಟೇ ಶಕ್ತವಾಯಿತು. ಫಾತಿಮಾ ಕತೂನ್ 3 ವಿಕೆಟ್ ಪಡೆದು ಮಿಂಚಿದರು. 9 ವಿಕೆಟ್ ಗಳ ರೋಚಕ ಜಯ ಪಡೆದ ಬಾಂಗ್ಲಾ ಟೂರ್ನಿಯಲ್ಲಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.