ಪಾಕಿಸ್ತಾನದ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ವಿರಾಟ್ ಕೊಹ್ಲಿ ಅವರ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದಿದ್ದಾರೆ. ಬಾಬರ್ ಈಗ ಐಸಿಸಿ ಟಿ-20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅತಿ ಹೆಚ್ಚು ಕಾಲ ನಂಬರ್-1 ಸ್ಥಾನ ಉಳಿಸಿಕೊಂಡ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ವಿರಾಟ್ ಹೆಸರಿನಲ್ಲಿತ್ತು. ವಿರಾಟ್ ಒಟ್ಟು 1013 ದಿನಗಳ ಕಾಲ ನಂಬರ್-1 ಆಗಿದ್ದರು. ಬುಧವಾರ ಬಿಡುಗಡೆಯಾದ ಶ್ರೇಯಾಂಕದ ನಂತರ ಬಾಬರ್ ವಿರಾಟ್ ರನ್ನು ಹಿಂದಿಕ್ಕಿದ್ದಾರೆ.
ಬಾಬರ್ ಇನ್ನೂ ನಂಬರ್-1 ಸ್ಥಾನದಲ್ಲಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ವಿರಾಟ್ ವಿರುದ್ಧ ಅವರ ಮುನ್ನಡೆ ಇನ್ನಷ್ಟು ಬಲಗೊಳ್ಳಲಿದೆ. ಬಾಬರ್ ಪ್ರಸ್ತುತ 818 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 794 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಶಾನ್ ಕಿಶನ್ 682 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ ಮತ್ತು ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಅತ್ಯುನ್ನತ ಶ್ರೇಯಾಂಕ ಹೊಂದಿದ್ದಾರೆ. ಟಾಪ್-10ರಲ್ಲಿರುವ ಭಾರತದ ಏಕೈಕ ಬ್ಯಾಟ್ಸ್‌ಮನ್ ಇಶಾನ್.
ವಿರಾಟ್ ಕೊಹ್ಲಿ 21ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು 571 ಅಂಕಗಳನ್ನು ಹೊಂದಿದ್ದಾರೆ. ಕೆಎಲ್ ರಾಹುಲ್ 17, ರೋಹಿತ್ ಶರ್ಮಾ 19 ಮತ್ತು ಶ್ರೇಯಸ್ ಅಯ್ಯರ್ 20ನೇ ಸ್ಥಾನದಲ್ಲಿದ್ದಾರೆ. ಇದೇ ಸಮಯದಲ್ಲಿ, ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಟಿ-20 ಶ್ರೇಯಾಂಕದಲ್ಲಿ ಏಳನೇ ಸ್ಥಾನ ಹೊಂದಿದ್ದಾರೆ.
ಐರ್ಲೆಂಡ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಬ್ಯಾಟ್ಸ್‌ಮನ್‌ಗಳಾದ ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ರ್ಯಾಂಕಿಂಗ್‌ನಲ್ಲಿ ಅದ್ಭುತ ಜಿಗಿತವನ್ನು ಕಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ದೀಪಕ್ ಹೂಡಾ 414 ಸ್ಥಾನ ಮೇಲೇರಿ ರ್ಯಾಂಕಿಂಗ್ ನಲ್ಲಿ 104ನೇ ಸ್ಥಾನಕ್ಕೆ ತಲುಪಿದ್ದಾರೆ. ದೀಪಕ್ ಮೊದಲ ಪಂದ್ಯದಲ್ಲಿ ಅಜೇಯ 47 ರನ್ ಹಾಗೂ ಎರಡನೇ ಪಂದ್ಯದಲ್ಲಿ 104 ರನ್ ಗಳಿಸಿದ್ದರು.
ಐರ್ಲೆಂಡ್ ವಿರುದ್ಧ ಟಿ-20 ವೃತ್ತಿಜೀವನದ ಮೊದಲ ಅರ್ಧಶತಕ ಗಳಿಸಿದ ಸಂಜು ಸ್ಯಾಮ್ಸನ್ 57 ಸ್ಥಾನಗಳನ್ನು ಗಳಿಸಿದ್ದಾರೆ. ಇದೀಗ 144ನೇ ಸ್ಥಾನಕ್ಕೆ ತಲುಪಿದ್ದಾರೆ. ಮಂಗಳವಾರ ಐರ್ಲೆಂಡ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಸಂಜು 77 ರನ್ ಗಳಿಸಿದ್ದರು. ಇದೇ ಸಮಯದಲ್ಲಿ, ಬೌಲರ್ ಹರ್ಷಲ್ ಪಟೇಲ್ ಕೂಡ 37 ನೇ ಸ್ಥಾನದಿಂದ 33 ನೇ ಸ್ಥಾನಕ್ಕೆ ಏರಿದ್ದಾರೆ.