ಆಸ್ಟ್ರೇಲಿಯನ್ ಓಪನ್ 2022 – 14ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸ್ಪೇನ್ ಗೂಳಿ ರಫೆಲ್ ನಡಾಲ್
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಅಂದ ಹಾಗೇ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 14ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ರಫೆಲ್ ನಡಾಲ್ ಅವರು ಜಾನ್ ನ್ಯುಕಾಂಬೆ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ. 15 ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ರೋಜರ್ ಫೆಡರರ್ ಅವರು ಅಗ್ರ ಸ್ಥಾನದಲ್ಲಿದ್ದಾರೆ.
ಪುರುಷರ ಸಿಂಗಲ್ಸ್ ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಎರಡು ಗಂಟೆ 40 ನಿಮಿಷಗಳ ಹೋರಾಟದಲ್ಲಿ 7-6, 6-2, 6-2ರಿಂದ ಆಡ್ರಿಯನ್ ಮ್ಯಾನರಿನೊ ಅವರನ್ನು ಸೋಲಿಸಿದ್ರು.
ಒಟ್ಟಾರೆ ರಫೆಲ್ ನಡಾಲ್ ಅವರು ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ 45ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ರೋಜರ್ ಫೆಡರರ್ ಅವರು 58 ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಅಗ್ರ ಸ್ಥಾನದಲ್ಲಿದ್ದಾರೆ. ನೊವಾಕ್ ಜಾಕೊವಿಕ್ 51 ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರಫೆಲ್ ನಡಾಲ್ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಇದೀಗ ರಫೆಲ್ ನಡಾಲ್ ಅವರು ರೋಜರ್ ಫೆಡರರ್ ಮತ್ತು ಜಾಕೊವಿಕ್ ಅವರ ಅನುಪಸ್ಥಿತಿಯಲ್ಲಿ ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವುದನ್ನು ಎದುರು ನೋಡುತ್ತಿದ್ದಾರೆ.
ಪುರುಷರ ಇನ್ನೊಂದು ಸಿಂಗಲ್ಸ್ ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಡೆನಿಸ್ ಶಪೊವಾಲೊವ್ ಅವರು 6-3, 7-6, 6-3ರಿಂದ ಮೂರನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಝಿವೆರ್ವ್ ಅವರಿಗೆ ಶಾಕ್ ನೀಡಿದ್ರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆನಿಸ್ ಶಪೊವಾಲೊವ್ ಅವರು ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ.