ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಕೊನೆ ಓವರ್ನಲ್ಲಿ ಗೆಲುವು ಸಾಧಿಸಿದೆ.
ಕ್ವೀನ್ಸ್‌ಲ್ಯಾಂಡಿನ ಕ್ಯಾರರಾ ಓವಲ್ ಮೈದಾನದಲ್ಲಿ 146 ರನ್ ಸಾಧಾರಣ ಗುರಿ ಬೆನ್ನತ್ತಿದ್ದ ಆತಿಥೇಯ ಆಸೀಸ್, ಪವರ್ ಪ್ಲೇಯಲ್ಲಿ ಅಬ್ಬರಿಸಿದ್ದು ನೋಡಿದರೆ ಸುಲಭ ಗೆಲ್ಲುತ್ತೆ ಎಂದು ಎಲ್ಲರೂ ಅಂದುಕೊಂಡಿದರು. ಆದರೆ, ವಿಂಡೀಸ್ ಬೌಲರ್ಸ್ ಕರಾರುವಾಕ್ ದಾಳಿಗೆ ನಲುಗಿದ ಫಿಂಚ್ ಪಡೆ, ಪೆವಿಲಿಯನ್ ಪರೇಡ್ ನಡೆಸಿತು. ಪರಿಣಾಮ 19.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಬೇಕಾಯಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆರಿಬಿಯನ್ನರಿಗೆ ಉತ್ತಮ ಓಪನಿಂಗ್ ಸಿಗಲಿಲ್ಲ. ಕೈಲ್ ಮೇಯರ್ಸ್ (39 ರನ್, 36 ಎಸೆತ) ಮಿಂಚಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟರ್ ಕೂಡ ಉತ್ತಮ ಮೊತ್ತ ಕಲೆಹಾಕಲಿಲ್ಲ. ಹ್ಯಾಝಲ್ವುಡ್ ದಾಳಿಗೆ ಒಬ್ಬರ ಹಿಂದೊಬ್ಬರು ಪೆರೇಡ್ ನಡೆಸಿದರು. ಬ್ರ್ಯಾಂಡನ್ ಕಿಂಗ್ 12, ಜಾನ್ಸನ್ ಚಾರ್ಲ್ಸ್ 3, ನಿಕೋಲಸ್ ಪೂರನ್ 2, ರೋವ್ಮನ್ ಪೊವೆಲ್ 7, ಜೇಸನ್ ಹೋಲ್ಡರ್ 13, ಓಡಿಯನ್ ಸ್ಮಿತ್ 27 ರನ್ ಗಳಿಸಿದರು. ಆಸೀಸ್ ಪರ ಹ್ಯಾಝಲ್ವುಡ್ 3 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್ ಪಡೆದರು.
146 ರನ್ ಸಾಧಾರಣ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ (14 ರನ್), ಮಿಚೆಲ್ ಮಾರ್ಷ್ (3 ರನ್) ವಿಕೆಟ್ ಕಳೆದುಕೊಂಡು ಸಂಕಷ್ಟಕೆ ಸಿಲುಕಿತು. ಕ್ಯಾಮರೂನ್ ಗ್ರೀನ್ ಆಟ 14 ರನ್ನಿಗೆ ಅಂತ್ಯವಾಯಿತು. ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಟಿಮ್ ಡೇವಿಡ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಆಗ ತಂಡಕ್ಕೆ ನೆರವಾಗಿದ್ದೇ ನಾಯಕ ಆರನ್ ಫಿಂಚ್ ಮತ್ತು ಮ್ಯಾಥ್ಯೂ ವೇಡ್. ಫಿಂಚ್ 53 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 58 ಗಳಿಸಿದರೆ, ವೇಡ್ 29 ಎಸೆತಗಳಲ್ಲಿ 39 ರನ್ ಗಳಿಸಿ, ತಂಡಕ್ಕೆ ಗೆಲುವು ತಂದುಕೊಟ್ಟರು.