ತವರಿನವಲ್ಲಿ ಇತ್ತೀಚೆಗೆ ನಡೆದ ಟಿ20 ಸರಣಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಮುಂಬರುವ ಪಾಕಿಸ್ತಾನ್ ಪ್ರವಾಸದ ವೇಳೆ ನಡೆಯುವ ಏಕದಿನ ಹಾಗೂ ಟಿ20 ಸರಣಿಗೆ ಬಲಿಷ್ಠ ತಂಡವನ್ನು ರೂಪಿಸಿಕೊಂಡಿದೆ.
ಪಾಕಿಸ್ತಾನ್ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಮೂರು ಏಕದಿನ, ಒಂದು ಟಿ20 ಹಾಗೂ ಮೂರು ಟೆಸ್ಟ್ ಪಂದ್ಯವನ್ನಾಡಲಿದೆ. ವೈಟ್ ಬಾಲ್ ಸರಣಿಗಾಗಿ ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಹಾಗೂ ಟ್ರಾವಿಸ್ ಹೆಡ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನೂ ಆಸೀಸ್ ತಂಡದ ಪ್ರಮುಖ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್, ಜಾಶ್ ಹೇಜ಼ಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಹಾಗೂ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ಏಕದಿನ ಮತ್ತು ಟಿ20 ತಂಡದಿಂದ ಕೈಬಿಡಲಾಗಿದ್ದು, ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಗೆ ತಂಡಕ್ಕೆ ಮರಳುವ ಸಾಧ್ಯತೆ ಇದೆ.
ಆಸೀಸ್ ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್, ವೈಯಕ್ತಿಕ ಕಾರಣದಿಂದ ಈಗಾಗಲೇ ಪಾಕಿಸ್ತಾನ ಪ್ರವಾಸದಿಂದ ಹೊರಗುಳಿಯುವುದಾಗಿ ತಿಳಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ 16 ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದು, ಅನುಭವಿ ಆರಂಭಿಕ ಆಟಗಾರ ಆರನ್ ಫಿಂಚ್ ನೇತೃತ್ವದಲ್ಲಿ ಆಸೀಸ್ ತಂಡ ಮುನ್ನಡೆಯಲಿದೆ. ಇತ್ತೀಚೆಗೆ ಟೆಸ್ಟ್ ತಂಡದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚೆಗ್ನೆ ಹಾಗೂ ಟ್ರಾವಿಸ್ ಹೆಡ್ ಅವರುಗಳು ಹಲವು ದಿನಗಳ ನಂತರ ವೈಟ್ ಬಾಲ್ ಸರಣಿಯಲ್ಲಿ ಸ್ಥಾನ ಪಡೆದಿದ್ದರೆ. ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆರಂಭಿಕ ಆಟಗಾರ ಬೆನ್ ಮೆಕ್ಡರ್ಮಾಟ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಇನ್ನೂ ತಂಡದ ಪ್ರಮುಖ ಬೌಲರ್ಗಳಾದ ಪ್ಯಾಟ್ ಕಮ್ಮಿನ್ಸ್, ಹೇಜ಼ಲ್ವುಡ್ ಹಾಗೂ ಸ್ಟಾರ್ಕ್ ಅನುಪಸ್ಥಿತಿಯಲ್ಲಿ ಸೆನ್ ಅಬ್ಬೋಟ್, ಜೇಸನ್ ಬೆರ್ಹರ್ನ್ಡ್ರಾಫ್, ನಾಥನ್ ಎಲ್ಲಿಸ್ ಮತ್ತು ಕೇನ್ ರಿಚರ್ಡ್ಸನ್ ತಂಡ ವೇಗದ ಬೌಲಿಂಗ್ ನೇತೃತ್ವದವಹಿಸಲಿದ್ದರೆ. ಆಡಂ ಜ಼ಂಪ ಹಾಗೂ ಆಸ್ಟನ್ ಅಗರ್ ಸ್ಪಿನ್ ತಂಡದ ಪ್ರಮುಖ ಸ್ಪಿನ್ನರ್ಗಳಾಗಿದ್ದಾರೆ. ಇನ್ನೂ ಮಾರ್ಕಸ್ ಸ್ಟಾಯ್ನಿಸ್, ಮಿಚೆಲ್ ಮಾರ್ಷ್ ಹಾಗೂ ಕೆಮರೂನ್ ಗ್ರೀನ್ ತಂಡದ ಆಲ್ರೌಂಡರ್ಗಳಾಗಿದ್ದಾರೆ.
ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಸರಣಿಗಾಗಿ ಪಾಕಿಸ್ತಾನ್ ಸಹ ಸಜ್ಜಾಗಿದೆ. 2021ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಸೋಲಿನ ಆಘಾತ ಅನುಭವಿಸಿದ್ದ ಪಾಕಿಸ್ತಾನ್, ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದೆ. ಉಭಯ ತಂಡಗಳ ನಡುವೆ ಸರಣಿ ಮಾರ್ಚ್ 4ರಿಂದ ಆರಂಭವಾಗಲಿದೆ.
ಏಕದಿನ & ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ: ಆರನ್ ಫಿಂಚ್(ನಾಯಕ), ಸೆನ್ ಅಬ್ಬೋಟ್, ಆಷ್ಟನ್ ಅಗರ್, ಜೇಸನ್ ಬೆರ್ಹರ್ನ್ಡ್ರಾಫ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕೆಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಸ್ಚೆಗ್ನೆ, ಮಿಚೆಲ್ ಮಾರ್ಷ್, ಬೆನ್ ಮೆಕ್ಡರ್ಮಾಟ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟಾಯ್ನಿಸ್, ಆಡಂ ಜ಼ಂಪ
ಆಸ್ಟ್ರೇಲಿಯಾ-ಪಾಕಿಸ್ತಾನ್ ಸರಣಿ ವೇಳಾಪಟ್ಟಿ:
ಮೊದಲ ಟೆಸ್ಟ್: ಮಾರ್ಚ್ 4-8, ರಾವಲ್ಪಿಂಡಿ
ಎರಡನೇ ಟೆಸ್ಟ್: ಮಾ.12-16, ಕರಾಚಿ
ಮೂರನೇ ಟೆಸ್ಟ್: ಮಾ.21-25, ಲಾಹೋರ್
ಮೊದಲ ಏಕದಿನ: ಮಾರ್ಚ್ 29, ರಾವಲ್ಪಿಂಡಿ
ಎರಡನೇ ಏಕದಿನ: ಮಾ.31, ರಾವಲ್ಪಿಂಡಿ
ಮೂರನೇ ಏಕದಿನ: ಏಪ್ರಿಲ್ 2, ರಾವಲ್ಪಿಂಡಿ
ಏಕೈಕ ಟಿ20: ಏಪ್ರಿಲ್ 5, ರಾವಲ್ಪಿಂಡಿ