ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನ್ ತನ್ನ ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಿದೆ. ತಂಡದ ವೇಗಿ ಹ್ಯಾರಿಸ್ ರಾಫ್ ಕೋವಿಡ್-19 ಸೋಂಕಿನಿಂದ ಮೊದಲ ಟೆಸ್ಟ್‌ನಿಂದ ಹೊರಗುಳಿದ ಹಿನ್ನೆಲೆಯಲ್ಲಿ ನಸೀಮ್ ಶಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಹಸನ್ ಅಲಿ ಹಾಗೂ ಫಹೀಮ್ ಅಶ್ರಫ್, ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಸ್ಟ್ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಇಫ್ತಿಕಾರ್ ಹಾಗೂ ಮೊಹಮ್ಮದ್ ವಸೀಂ ಜೂನಿಯರ್ ಅವರನ್ನುತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಹ್ಯಾರಿಸ್ ರಾಫ್ ಸಹ ಕೋವಿಡ್-19 ಪಾಸಿಟಿವ್ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ರಿಸರ್ವ್ ಬೌಲರ್ ಆಗಿ ರಾವಲ್ಪಿಂಡಿಗೆ ತೆರಳಿದ್ದ ಯುವ ವೇಗಿ ನಸೀಮ್ ಶಾ ಅವರನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. 19 ವರ್ಷದ ವೇಗದ ಬೌಲರ್ ನಸೀಮ್ ಶಾ, 2021ರ ಜನವರಿಯಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು. ಇದೀಗ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆದಿರುವ ನಸೀಮ್ ಶಾ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮೊಹಮ್ಮದ್ ವಸೀಂ ಜೂನಿಯರ್ ನಡುವೆ ಪೈಪೋಟಿ ಎದುರಿಸಬೇಕಿದೆ.
ಎರಡು ದಶಕಗಳ ಬಳಿಕ ನಡೆಯುತ್ತಿರುವ ಐತಿಹಾಸಿ ಟೆಸ್ಟ್ ಸರಣಿ ಉಭಯ ತಂಡಗಳಿಗೂ ಮಹತ್ವದ್ದಾಗಿದ್ದು, ಸರಣಿಯ ಮೊದಲ ಪಂದ್ಯ ಮಾರ್ಚ್ 4ರಂದು ರಾವಲ್ಪಿಂಡಿಯಲ್ಲಿ ನಡೆಯಲಿದೆ.