T20 World Cup ಬಳಿಕ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡವನ್ನ ಪ್ರಕಟಿಸಲಾಗಿದ್ದು, ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದ ಜೇಸನ್ ರಾಯ್(Jason Roy) ತಂಡಕ್ಕೆ ಮರಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿ(One-Day International) ಹಿನ್ನೆಲೆಯಲ್ಲಿ 15 ಆಟಗಾರರ ಇಂಗ್ಲೆಂಡ್ ತಂಡವನ್ನ ಪ್ರಕಟಿಸಲಾಗಿದೆ. ಜೇಸನ್ ರಾಯ್ ಅವರು ತಂಡಕ್ಕೆ ಕಮ್ ಬ್ಯಾಕ್ ಮಾಡಿದರೆ, ಜೇಮ್ಸ್ ವಿನ್ಸ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಸಹ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜೋಸ್ ಬಟ್ಲರ್ ಅವರ ಸಾರಥ್ಯದಲ್ಲಿ ಇಂಗ್ಲೆಂಡ್ ಮುನ್ನಡೆಯಲಿದ್ದು, ಆಸೀಸ್ ವಿರುದ್ಧದ ODI ಸರಣಿಯಿಂದ ಬೆನ್ ಸ್ಟೋಕ್ಸ್ ಮತ್ತು ಮಾರ್ಕ್ ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಸ್ಯಾಮ್ ಬಿಲ್ಲಿಂಗ್ಸ್(Sam Billings) ಮತ್ತು ಜೇಮ್ಸ್ ವಿನ್ಸ್(James Vince) ಇಬ್ಬರೂ ಜುಲೈ 2021ರಲ್ಲಿ ಕೊನೆಯದಾಗಿ ಇಂಗ್ಲೆಂಡ್ ಪರ ODI ಆಡಿದ್ದರು. ಆದರೆ ಜೇಸನ್ ರಾಯ್ ಈ ವರ್ಷದ ಜುಲೈನಲ್ಲಿ ಲೀಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದರು. ಉಳಿದಂತೆ ಓಲಿ ಸ್ಟೋನ್, ಕ್ರಿಸ್ ಜೋರ್ಡಾನ್ ತಂಡದಲ್ಲಿ ತಮ್ಮ ಸ್ಥಾನ ಪಡೆದುಕೊಂಡಿರುವುದು ಗಮನಾರ್ಹ. ಏಕೆಂದರೆ ಸ್ಟೋನ್ 2018ರಿಂದ ಇಂಗ್ಲೆಂಡ್ ಪರ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಸ್ಟೋನ್ ಈ ಹಿಂದೆ ಮೂರು ಟೆಸ್ಟ್ ಹಾಗೂ ಒಂದು T20I ಪಂದ್ಯದಲ್ಲಿ ಆಡಿದ್ದರು. ಆದರೆ ಕ್ರಿಸ್ ಜೋರ್ಡಾನ್, ಎರಡು ವರ್ಷಗಳ ಹಿಂದೆ ಕೊನೆಯ ಬಾರಿಗೆ ODI ಪಂದ್ಯವನ್ನು ಆಡಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ನಾಲ್ಕು ಏಕದಿನ ಸರಣಿಗಳಲ್ಲಿ ಮೂರರಲ್ಲಿ ಇಂಗ್ಲೆಂಡ್ ಗೆದ್ದಿದೆ. ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾದಾಗ, 2020ರಲ್ಲಿ ಆಸ್ಟ್ರೇಲಿಯಾ 2-1ರಿಂದ ಸರಣಿಯನ್ನು ಗೆದ್ದುಕೊಂಡಿತು. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ODI ಸರಣಿ ನವೆಂಬರ್ 17ರಿಂದ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದ್ದು, ಉಳಿದ ಎರಡು ಪಂದ್ಯಗಳು ಸಿಡ್ನಿ ಮತ್ತು ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್(ನಾಯಕ), ಮೊಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಸ್ಯಾಮ್ ಕರ್ರನ್, ಲಿಯಾಮ್ ಡಾಸನ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೇಸನ್ ರಾಯ್, ಫಿಲ್ ಸಾಲ್ಟ್, ಓಲಿ ಸ್ಟೋನ್, ಜೇಮ್ಸ್ ವಿನ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಲ್ಯೂಕ್ ವುಡ್.