ಏಷ್ಯಾಕಪ್-2023 ಟೂರ್ನಿಯ ಸೂಪರ್-4 ಪಂದ್ಯಗಳು ಇಂದಿನಿಂದ ಆರಂಭಗೊಳ್ಳಲಿದ್ದು, ಇಂದು ನಡೆಯುವ ಮೊದಲ ಮುಖಾಮುಖಿಯಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಲಾಹೋರ್ ಅಂಗಳದಲ್ಲಿ ಹಣಾಹಣಿ ನಡೆಸಲಿವೆ.
ಲೀಗ್ ಹಂತದ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 2 ರನ್ಗಳ ರೋಚಕ ಗೆಲುವು ಸಾಧಿಸಿದ ಶ್ರೀಲಂಕಾ 4ನೇ ತಂಡವಾಗಿ ಸೂಪರ್-4 ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸೂಪರ್-4 ಹಂತವನ್ನ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದವು. ಇಂದಿನಿಂದ ಆರಂಭವಾಗಲಿರುವ ಏಷ್ಯಾಕಪ್ನ ಸೂಪರ್-4 ಪಂದ್ಯಗಳು ಸೆ.15ಕ್ಕೆ ಮುಗಿಯಲಿದ್ದು, ಸೆ.17ಕ್ಕೆ ನಡೆಯುವ ಫೈನಲ್ನಲ್ಲಿ ಸೂಪರ್-4 ಹಂತದಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.
ಭಾರತ ಮತ್ತು ಪಾಕಿಸ್ತಾನ(ಎ ಗುಂಪು):
ಟೂರ್ನಿಯ ಎ ಗುಂಪಿನಿಂದ ಪಾಕಿಸ್ತಾನ ಹಾಗೂ ಭಾರತ ತಂಡಗಳು ಸೂಪರ್-4 ಹಂತಕ್ಕೆ ಎಂಟ್ರಿಕೊಟ್ಟಿವೆ. ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಪಾಕಿಸ್ತಾನ ಟೇಬಲ್ ಟಾಪರ್ ಆಗಿ ಸೂಪರ್-4 ಪ್ರವೇಶಿಸಿದರೆ. ಭಾರತ ಸಹ ನೇಪಾಳ ವಿರುದ್ಧ 10 ವಿಕೆಟ್ಗಳ ಸುಲಭದ ಗೆಲುವಿನ ಮೂಲಕ ಸೂಪರ್-4 ಹಂತಕ್ಕೇರಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ಲೀಗ್ ಹಂತದ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾದ ಕಾರಣ ಎರಡು ತಂಡಗಳಿಗೆ 1 ಅಂಕ ನೀಡಲಾಗಿತ್ತು. ಹೀಗಾಗಿ ಟೇಬಲ್ ಟಾಪರ್ ಆದ ಪಾಕಿಸ್ತಾನ(A1) ಹಾಗೂ ಭಾರತ(A2) ತಂಡಗಳಾಗಿ ಸೂಪರ್ 4 ಪ್ರವೇಶಿಸಿವೆ.
ಶ್ರೀಲಂಕಾ-ಬಾಂಗ್ಲಾದೇಶ(ಬಿ ಗುಂಪು):
ಬಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಶ್ರೀಲಂಕಾ ಲೀಗ್ ಹಂತದಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳ ವಿರುದ್ಧ ಗೆದ್ದು, ಟೇಬಲ್ ಟಾಪರ್ ಆಗುವ ಮೂಲಕ B1 ತಂಡವಾಗಿ ಸೂಪರ್-4 ಪ್ರವೇಶಿಸಿದರೆ. ಅಫ್ಘಾನಿಸ್ತಾನದ ವಿರುದ್ಧ 89 ರನ್ಗಳ ಗೆಲುವಿನೊಂದಿಗೆ ಬಾಂಗ್ಲಾದೇಶ B2 ತಂಡವಾಗಿ ಸೂಪರ್-4 ಪ್ರವೇಶಿಸಿವೆ.
ಇಂದು ಪಾಕ್-ಬಾಂಗ್ಲಾ ಕದನ:
ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಇಂದು ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಹಣಾಹಣಿ ನಡೆಸಲಿವೆ. ಲಾಹೋರ್ನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಇದಕ್ಕಾಗಿ ಎರಡು ತಂಡಗಳು ತಮ್ಮ ತಯಾರಿ ಮಾಡಿಕೊಂಡಿವೆ. ಮೇಲ್ನೋಟಕ್ಕೆ ಪಾಕಿಸ್ತಾನ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಬಲಿಷ್ಠವಾಗಿದ್ದು, ಜೊತೆಗೆ ತವರಿನ ಲಾಭ ಕೂಡ ಸಿಗಲಿದೆ. ಈ ನಡುವೆ ಪ್ರಮುಖ ಬ್ಯಾಟರ್ ನಜ್ಮುಲ್ ಶಾಂಟೊ ಅಲಭ್ಯತೆ ನಡುವೆ ಲಿಟನ್ ದಾಸ್ ಕಮ್ಬ್ಯಾಕ್ನೊಂದಿಗೆ ಪಾಕಿಸ್ತಾನದ ಸವಾಲು ಎದುರಿಸಲಿದೆ.
ಸೂಪರ್-4 ವೇಳಾಪಟ್ಟಿ:
ಸೆಪ್ಟೆಂಬರ್ 6: ಪಾಕಿಸ್ತಾನ v ಬಾಂಗ್ಲಾದೇಶ, ಲಾಹೋರ್ನಲ್ಲಿ
ಸೆಪ್ಟೆಂಬರ್ 9: ಶ್ರೀಲಂಕಾ v ಬಾಂಗ್ಲಾದೇಶ, ಕೊಲಂಬೊ
ಸೆಪ್ಟೆಂಬರ್ 10: ಭಾರತ v ಪಾಕಿಸ್ತಾನ, ಕೊಲಂಬೊ
ಸೆಪ್ಟೆಂಬರ್ 12: ಭಾರತ v ಶ್ರೀಲಂಕಾ, ಕೊಲಂಬೊ
ಸೆಪ್ಟೆಂಬರ್ 14: ಪಾಕಿಸ್ತಾನ v ಶ್ರೀಲಂಕಾ, ಕೊಲಂಬೊ
ಸೆಪ್ಟೆಂಬರ್ 15: ಭಾರತ v ಬಾಂಗ್ಲಾದೇಶ, ಕೊಲಂಬೊ
ಸೆಪ್ಟೆಂಬರ್ 17: ಏಷ್ಯಾಕಪ್ ಫೈನಲ್, ಕೊಲಂಬೊ
Asia Cup, Super 4s, Pakistan, Bangladesh, India, Sri Lanka