ಭಾರತದ ತಾರಾ ಡಬಲ್ಸ್ ಜೋಡಿ ಸಾತ್ವಿಕ್‍ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು.
ದಿನೇಶ್ ಖನ್ನಾ ನಂತರ ಬರೋಬ್ಬರಿ 58 ವರ್ಷಗಳ ಬಳಿಕ ಪ್ರಶಸ್ತಿ ಬರವನ್ನು ಸಾತ್ವಿಕ್ ಹಾಗು ಚಿರಾಗ್ ನೀಗಿಸಿದ್ದಾರೆ.
ಪುರುಷರ ಡಬಲ್ಸ್‍ನ ಫೈನಲ್‍ನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಮಲೇಷ್ಯಾದ ಒಂಗ್ ಯಿವ ಸಿನ್ ಹಾಗೂ ಟಿಯೊ ಏ ಯಿ ವಿರುದ್ಧ 16-21, 21-17, 21-19 ಅಂಕಗಳಿಂದ ಗೆದ್ದು ಚಾಂಪಿಯನ್‍ಶಿಪ್ ಮುಡಿಗೇರಿಸಿಕೊಂಡಿತು. 2022ರ ವಿಶ್ವ ಚಾಂಪಿಯನ್‍ಶಿಪ್‍ನ ಕಂಚಿನ ಪದಕ ವಿಜೇತರಾದ ಸಾತ್ವಿಕ್ ಹಾಗೂ ಚಿರಾಗ್ ಮೊದಲ ಸುತ್ತಿನ ಸೋಲಿನ ಬಳಿಕ ಎಚ್ಚೆತ್ತು ಆಡಿ ವಿಜಯಿಯಾದರು.
1965ರಲ್ಲಿ ದಿನೇಶ್ ಖನ್ನಾ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದಿದ್ದ ಏಕೈಕ ಭಾರತೀಯರಾಗಿದ್ದರು. 1971ರಲ್ಲಿ ನಡೆದ ಏಷ್ಯಾ ಚಾಂಪಿಯನ್‍ಶಿಪ್‍ನಲ್ಲಿ ದೀಪು ಘೋಷ್ ಮತ್ತು ರಾಮನ್ ಘೋಷ್ ಪುರುಷರ ಡಬಲ್ಸ್‍ನಲ್ಲಿ ಕಂಚು ಗೆದ್ದಿದ್ದರು.
ಸಾತ್ವಿಕ್ ಮತ್ತು ಚಿರಾಗ್ ಬಾಸೆಲ್‍ನಲ್ಲಿ ಸ್ವಿಸ್ ಓಪನ್ ಗೆದ್ದಿದ್ದರು.ಈ ಋತುವಿನ ಅತ್ಯುತ್ತಮ ಆಟಗಾರರಾಗಿದ್ದಾರೆ. 2022ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬಿಡಬ್ಲ್ಯುಎಫ್ನಲ್ಲಿ 5 ಪದಕ ಗೆದ್ದಿದ್ದರು.