ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪಂದ್ಯ ನಾಕೌಟ್ ಮ್ಯಾಚ್ ಅಲ್ಲ. ಆದರೆ ನಾಕೌಟ್ ಪಂದ್ಯದಷ್ಟೇ ಮಹತ್ವ ಪಡೆದಿದೆ. ಯಾಕಂದರೆ ಈ ಪಂದ್ಯ ಯಾವುದೇ ತಂಡ ಸೋತರೂ ಪ್ಲೇ-ಆಫ್ ನಿಂದ ಬಹುತೇಕ ಹೊರಬಿದ್ದಂತೆ. ಹೀಗಾಗಿ ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಇದರ ಜೊತೆಗೆ ನಂಬರ್ ಗೇಮ್ ಬಗ್ಗೆಯೂ ಚರ್ಚೆ ಜೋರಾಗಿದೆ.
ಬ್ರಾವೋ ಫಿಟ್ ಆದರೆ..?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಸನ್ ರೈಸರ್ಸ್ ವಿರುದ್ಧದ ಪಂದ್ಯವನ್ನು ಗಾಯದ ಕಾರಣದಿಂದ ಮಿಸ್ ಮಾಡಿಕೊಂಡಿದ್ದರು. ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಬ್ರಾವೋ ಫಿಟ್ ಆಗಿದ್ದಾರೆ. ಹೀಗಾಗಿ ಬ್ರಾವೋ ಮಿಚೆಲ್ ಸ್ನಾಂಟ್ನರ್ ಜಾಗದಲ್ಲಿ ಆಡಬೇಕಿದೆ.
ಜಡೇಜಾ ಭಯ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರವೀಂದ್ರ ಜಡೇಜಾ ಬೌಲಿಂಗ್ ಭಯವಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಜಡೇಜಾ 13 ಮುಖಾಮುಖಿಗಳಲ್ಲಿ 7 ಬಾರಿ ಔಟ್ ಮಾಡಿದ್ದಾರೆ. ಜಡೇಜಾ ವಿರುದ್ಧ ಮ್ಯಾಕ್ಸ್ವೆಲ್ 10.1 ಸರಾಸರಿ ಮಾತ್ರ ಹೊಂದಿದ್ದಾರೆ. ಮತ್ತೊಂದು ಕಡೆ ವಿರಾಟ್ ಕೊಹ್ಲಿಯನ್ನು ಜಡೇಜಾ 16 ಮುಖಾಮುಖಿಗಳಲ್ಲಿ 3 ಬಾರಿ ಔಟ್ ಮಾಡಿದ್ದು ಮಾತ್ರವಲ್ಲದೆ 108ರ ಸ್ಟ್ರೈಕ್ ರೇಟ್ ಗೆ ಕಟ್ಟಿಹಾಕಿದ್ದಾರೆ.
ಧೋನಿ & ಡು ಪ್ಲೆಸಿಸ್:
ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪಂದ್ಯದಲ್ಲಿ “ಡಿ” ಸಿಕ್ಕಾಪಟ್ಟೆ ಮಹತ್ವಪಡೆದಿದೆ. ಧೋನಿ ಮತ್ತು ಡು ಪ್ಲೆಸಿಸ್ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಆರ್ಸಿಬಿ ಧೋನಿ ಪಾಲಿಗೆ ಸಿಕ್ಸರ್ ಸಿಡಿಸಲು ಫೆವರೀಟ್ ಟೀಮ್. ಆರ್ಸಿಬಿ ವಿರುದ್ಧ ಧೋನಿ 46 ಸಿಕ್ಸರ್ ಸಿಡಿಸಿದ್ದಾರೆ.
ಡು ಪ್ಲೆಸಿಸ್ 10 ಪಂದ್ಯಗಳಲ್ಲಿ 8 ಬಾರಿ ವೇಗಿಗಳ ಎದುರು ಔಟ್ ಆಗಿದ್ದು ಕೊಂಚ ಭಯ ಹುಟ್ಟಿಸಿದೆ. ಮತ್ತೊಂದು ಕಡೆಯಲ್ಲಿ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಒಟ್ಟು 949 ರನ್ ಕಲೆಹಾಕಿದ್ದಾರೆ