ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಎರಡು ಸ್ಥಾನ ಮೇಲಕ್ಕೇರಿ 6ನೇ ಸ್ಥಾನಕ್ಕೆ ತಲುಪಿದ್ದಾರೆ.
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಲೋರಾ ವೂಲ್ವರ್ಟ್ (740 ಅಂಕ) ಎರಡು ಸ್ಥಾನ ಜಿಗಿದು ವಿಶ್ವದ ನಂಬರ್ ಒನ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಇವರು ವಿಶ್ವಕಪ್ ನಲ್ಲಿ 433 ರನ್ ಗಳಿಸಿದ್ದಾರೆ. ಅವರ ಪ್ರದರ್ಶನದ ಬಲದಿಂದ ಇವರು ಆಸೀಸ್ ನ ಇಬ್ಬರು ಆಟಗಾರ್ತಿಯರನ್ನು ಹಿಂದಿಕ್ಕಿದ್ದಾರೆ. ಇವರು ವಿಶ್ವಕಪ್ ನಲ್ಲಿ ಐದು ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.
ವೋಲ್ವರ್ಟ್ ಅಗ್ರಸ್ಥಾನಕ್ಕೆ ಏರಿದ್ದಾರೆಂದರೆ ಆಸ್ಟ್ರೇಲಿಯಾದ ಅಲಿಸ್ಸಾ ಹ್ಯಾಲೆ ಈ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇವರು ಅಗ್ರ ಸ್ಥಾನದಿಂದ ಜಾರಿ ಐದನೇ ಸ್ಥಾನದಲ್ಲಿದ್ದಾರೆ. ಬೆತ್ ಮೂನಿ ಎರಡನೇ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾದ ನಾಯಕಿ ಮೆಗ್ ಲೆನ್ನಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ನೆಟ್ ಸ್ಕೀಯರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ಮಿಥಾಲಿ ರಾಜ್ ಆರನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ನಂತರ ಮಿಥಾಲಿ ಅವರ ಶ್ರೇಯಾಂಕವು ಸುಧಾರಿಸಿದೆ. ಮಿಥಾಲಿ 686 ಅಂಕಗಳನ್ನು ಕಲೆ ಹಾಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ ಭಾರತದ ಅಭಿಯಾನ ಅಂತ್ಯಗೊಂಡಿದೆ. ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಇದು ಕೊನೆಯ ಪಂದ್ಯವಾಗಿತ್ತು. ಇನ್ನು ಭಾರತದ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 669 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕದಂತೆ ಬೌಲಿಂಗ್ನಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಬೌಲಿಂಗ್ನಲ್ಲಿ ಇಂಗ್ಲೆಂಡ್ನ ಸೋಫಿ ಎಕ್ಲೆಸ್ಟೋನ್ ಅಗ್ರಸ್ಥಾನದಲ್ಲಿದ್ದಾರೆ. ಅವರು ವಿಶ್ವಕಪ್ನಲ್ಲಿ 14 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯಾದ ಬೌಲರ್ ಜೆಸ್ ಜೊನಾಸ್ಸೆನ್ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಬೌಲರ್ ಶಬ್ನೀಮ್ ಇಸ್ಮಾಯಿಲ್ ಮೂರನೇ ಸ್ಥಾನ ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ 250 ವಿಕೆಟ್ಗಳನ್ನು ಪೂರೈಸಿದ ಜೂಲನ್ ಗೋಸ್ವಾಮಿ ಕೂಡ ಎರಡು ಸ್ಥಾನಗಳನ್ನು ಏರಿಕೆ ಕಂಡಿದ್ದಾರೆ. 663 ಅಂಕಗಳೊಂದಿಗೆ ಜೂಲನ್ ಐದನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಜೂಲನ್ ಆಡಿರಲಿಲ್ಲ.