ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆಗೆ ಸಿಲುಕಿರುವ ಪಾಕಿಸ್ತಾನ, ಇದೀಗ ಬದಲಿ ಆಟಗಾರರನ್ನ ಆಯ್ಕೆ ಮಾಡಿಕೊಂಡಿದೆ.
ಉಭಯ ತಂಡಗಳ ನಡುವಿನ ಐತಿಹಾಸಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಮತ್ತು ಆಲ್ರೌಂಡರ್ ಫಹೀಮ್ ಅಶ್ರಫ್ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ಮಾರ್ಚ್ 4ರಿಂದ ರಾವಲ್ಪಿಂಡಿಯಲ್ಲಿ ನಡೆಯುವ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಇವರ ಸ್ಥಾನಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಇಫ್ತಿಕರ್ ಅಹ್ಮದ್ ಹಾಗೂ ವೇಗದ ಬೌಲರ್ ಮೊಹಮ್ಮದ್ ವಾಸಿಂ ಜೂನಿಯರ್ ಅವರನ್ನ ಆಯ್ಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಇಸ್ಲಾಮಾಬಾದ್ ತಲುಪಿರುವ ಇಫ್ತಿಕರ್ ಮತ್ತು ವಾಸಿಂ, ತಂಡವನ್ನು ಕೂಡಿಕೊಳ್ಳುವ ಮುನ್ನ ಕೋವಿಡ್-19 ಪರೀಕ್ಷೆಗೆ ಒಳಪಟ್ಟು, ನಂತರ ಮೂರು ದಿನಗಳ ಕಾಲ ಐಸೋಲೇಷನ್ನಲ್ಲಿ ಇರಲಿದ್ದಾರೆ. ಗಾಯದ ಸಮಸ್ಯೆಯಿಂದ ಮೊದಲ ಟೆಸ್ಟ್ನಿಂದ ಹೊರಗುಳಿದಿರುವ ಫಹೀಮ್ ಅಶ್ರಫ್ ಮತ್ತು ಹಸನ್ ಅಲಿ, ಮಾರ್ಚ್ 12ರಿಂದ ಕರಾಚಿಯಲ್ಲಿ ನಡೆಯುವ ಎರಡನೇ ಟೆಸ್ಟ್ಗೂ ಮುನ್ನ ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಮರಳುವ ನಿರೀಕ್ಷೆ ಇದೆ ಎಂದು ತಂಡದ ಆಡಳಿತ ಮಂಡಳಿ ವಿಶ್ವಾಸ ಹೊಂದಿದೆ.
ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿ ಎರಡು ತಂಡಗಳಿಗೂ ಅತ್ಯಂತ ವಿಶೇಷವಾಗಿದೆ. ಉಭಯ ತಂಡಗಳ ನಡುವೆ ಮೂರು ಟೆಸ್ಟ್ ಪಂದ್ಯ ನಡೆಯಲಿದೆ.
ಮಾರ್ಚ್ 4ರಿಂದ 8 : 1ನೇ ಟೆಸ್ಟ್, ರಾವಲ್ಪಿಂಡಿ
ಮಾರ್ಚ್ 12ರಿಂದ 16 : 2ನೇ ಟೆಸ್ಟ್, ಕರಾಚಿ
ಮಾರ್ಚ್ 21ರಿಂದ 25 : 3ನೇ ಟೆಸ್ಟ್, ಲಾಹೋರ್