ಪ್ರಸ್ತುತ ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್, ಮುಂದಿನ ಮೇ ಹಾಗೂ ಜೂನ್ ತಿಂಗಳಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನೆದರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.
ಐಸಿಸಿ ಕ್ರಿಕೆಟ್ ವರ್ಲ್ಡ್ಕಪ್ ಸೂಪರ್ ಲೀಗ್ ಅಡಿಯಲ್ಲಿ ಈ ಏಕದಿನ ಸರಣಿ ಆಯೋಜಿಸಲಾಗಿದ್ದು, 2023ರಲ್ಲಿ ನಡೆಯುವ ವಿಶ್ವಕಪ್ ಅರ್ಹತಾ ಸುತ್ತಿಗೆ ಆಯ್ಕೆ ಪಡೆಯುವ ನಿಟ್ಟಿನಲ್ಲಿ ಈ ಏಕದಿನ ಸರಣಿ ಆಯೋಜಿಸಲಾಗಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ, ಮೇ 31 ರಿಂದ ಜೂನ್ 4ರವರೆಗೆ ಆಮ್ಸ್ಟೆಲ್ವಿನ್ನ ವಿಆರ್ಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ವೆಸ್ಟ್ ಇಂಡೀಸ್ ಹಾಗೂ ನೆದರ್ಲೆಂಡ್ ತಂಡಗಳು ಇದೇ ಮೊದಲ ಬಾರಿಗೆ ಬೈಲ್ಯಾಟ್ರೆಲ್ ಏಕದಿನ ಸರಣಿಯಲ್ಲಿ ಮುಖಾಮುಖಿ ಆಗುತ್ತಿವೆ. ಎರಡು ತಂಡಗಳು ಈ ಹಿಂದೆ ಮಲ್ಟಿ-ಟೀಮ್ಸ್ ಸೀರಿಸ್ನಲ್ಲಿ ಪರಸ್ಪರ ಎದುರಾಗಿವೆ. ಈ ಮೊದಲು 2007ರಲ್ಲಿ ಹಾಗೂ 2011ರ ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿದೆ.
ಸರಣಿಯ ಕುರಿತು ಮಾಹಿತಿ ನೀಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸಿಇಒ ಜಾನಿ ಗ್ರೇವ್, ಎರಡು ತಂಡಗಳ ನಡುವಿನ ಕ್ರಿಕೆಟ್ ಸರಣಿ ಆಯೋಜಿಸುವ ನಿಟ್ಟಿನಲ್ಲಿ ನೆದರ್ಲೆಂಡ್ ಕ್ರಿಕೆಟ್ ಮಂಡಳಿಯೊಂದಿಗೆ ನಿರಂತರ ಪ್ರಯತ್ನ ನಡೆಸಲಾಗಿತ್ತು. ಇದೀಗ ಐಪಿಎಲ್ ಪಂದ್ಯಾವಳಿ ಮುಗಿಯುತ್ತಿದ್ದಂತೆ ಈ ಎರಡು ತಂಡಗಳ ನಡುವಿನ ಏಕದಿನ ಸರಣಿ ನಡೆಯುತ್ತಿರುವುದು ಸಂತಸ ನೀಡಿದೆ. ಮೊದಲ ಬಾರಿಗೆ ನೆದರ್ಲೆಂಡ್ ಪ್ರವಾಸ ಕೈಗೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ ಎಂದಿದ್ದಾರೆ.
ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಏಕದಿನ ಸರಣಿಗು ಮುನ್ನ ನೆದರ್ಲೆಂಡ್, ನ್ಯೂಜಿ಼ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮಾರ್ಚ್ 25ರಿಂದ ಏಪ್ರಿಲ್ 4ರವರೆಗೆ ಈ ಪಂದ್ಯಾವಳಿ ನಡೆಯಲಿದ್ದು, ಎರಡು ತಂಡಗಳ ನಡುವೆ ಒಂದು ಟಿ20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿದೆ. ಅಲ್ಲದೇ ತವರಿನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಬಳಿಕ, ಜೂ.17ರಿಂದ 22ರವರೆಗೆ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನೆದರ್ಲೆಂಡ್ ತಂಡ ಭಾಗವಹಿಸಲಿದೆ.