ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಏಕದಿನ -ಟಿ-20 ಸರಣಿಗೆ ಒಮಿಕ್ರಾನ್ ಅಡ್ಡಿ..!
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಏಕದಿನ ಸರಣಿ ಮತ್ತು ಏಕೈಕ ಟಿ-20 ಪಂದ್ಯಕ್ಕೆ ಒಮಿಕ್ರಾನ್ ಸೋಂಕು ಅಡ್ಡಿಯನ್ನುಂಟು ಮಾಡಿದೆ.
ನ್ಯೂಜಿಲೆಂಡ್ ತಂಡವು ಈ ಹಿಂದೆ ನಿಗದಿಯಾಗಿದ್ದಂತೆ ಜನವರಿ 24ರಿಂದ ಫೆಬ್ರವರಿ 9ರವರೆಗೆ ಮೂರು ಏಕದಿನ ಮತ್ತು ಏಕೈಕ ಟಿ-20 ಪಂದ್ಯವನ್ನು ಆಡಬೇಕಿತ್ತು. ಪರ್ತ್, ಹೋಬರ್ಟ್ ಮತ್ತು ಸಿಡ್ನಿಯಲ್ಲಿ ಏಕದಿನ ಪಂದ್ಯಗಳನ್ನು ಆಡಬೇಕಿತ್ತು. ಹಾಗೂ ಕ್ಯಾನ್ ಬೆರಾದಲ್ಲಿ ಏಕೈಕ ಟಿ-20 ಪಂದ್ಯವನ್ನು ಆಡಬೇಕಿತ್ತು.
ಆದ್ರೆ ಒಮಿಕ್ರಾನ್ ಸೋಂಕು ಈ ಸರಣಿಗೆ ಅಡ್ಡಿಯನ್ನುಂಟು ಮಾಡಿದೆ. ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ನ್ಯೂಜಿಲೆಂಡ್ ಸರ್ಕಾರ ನಿಗದಿಪಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪರಿಪಾಲಿಸುವುದು ಕಷ್ಟಕರವಾಗಿದೆ. ಹೀಗಾಗಿ ಈ ಎರಡು ಕ್ರಿಕೆಟ್ ಮಂಡಳಿಗಳು ಸರಣಿಯನ್ನು ಮುಂದೂಡುವ ತೀರ್ಮಾನಕ್ಕೆ ಬಂದಿವೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಗಳು ಮುಂದಿನ ದಿನಗಳಲ್ಲಿ ಸರಣಿ ನಡೆಸಲು ಹೊಸ ವೇಳಾಪಟ್ಟಿಯನ್ನು ನಿಗದಿಪಡಿಸಲಿದೆ.
ಈ ನಡುವೆ, ಪಂದ್ಯವನ್ನು ನೋಡಲು ಖರೀದಿಸಿದ್ದ ಟಿಕೆಟ್ ಹಣವನ್ನು ವಾಪಸ್ ನೀಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.
ಇನ್ನು ಫೆಬ್ರವರಿ 11ರಿಂದ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ ಐದು ಟಿ-20 ಪಂದ್ಯಗಳನ್ನು ಆಡಲಿದೆ.