ಭುವನೇಶ್ವರ್: ಎರಡನೇ ಅವಧಿಯಲ್ಲಿ ತಿವಾರಿ ಬಾರಿಸಿದ ಅಮೋಘ ಗೋಲಿನ ನೆರವಿನಿಂದ ಆತಿಥೇಯ ಭಾರತ ತಂಡ ಎಫ್ ಐಎಚ್ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಮಣಿಸಿದೆ.
ಬುಧವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಭಾರತ 1-0ಯಿಂದ ಪ್ರವಾಸಿ ಬೆಲ್ಜಿಯಂ ತಂಡವನ್ನು ಮಣಿಸಿತು. ಸೆಮಿಫೈನಲ್ಸ್ ನಲ್ಲಿ ಭಾರತ, ಜರ್ಮನಿಯ ವಿರುದ್ಧ ಡಿಸೆಂಬರ್ ಮೂರರಂದು ಹೋರಾಟ ನಡೆಸಲಿದೆ.
ಮೊದಲಾವಧಿಯಲ್ಲಿ ಭಾರತ ತಂಡ ಆಟಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಎದುರಾಳಿಯ ರಕ್ಷಣಾ ವಿಭಾಗದ ಕಣ್ಣಿಗೆ ಮಣ್ಣು ಎರೆಚಿ ಆರಂಭದಲ್ಲಿ ಮೊದಲ ಗೋಲು ಬಾರಿಸುವ ಆಸೆಗೆ ಮೊದಲಾವಧಿಯಲ್ಲಿ ಫಲ ಲಭಿಸಲಿಲ್ಲ.
ಎರಡನೇ ಅವಧಿಯಲ್ಲಿ ಸೊಗಸಾದ ಯೋಜನಾ ಬದ್ಧ ಆಟವಾಡಿದ ಭಾರತ 21ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿತು. ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಶರದ್ ನಂದ್ ತಿವಾರಿ ಗೋಲು ಬಾರಿಸಿ ಮಿಂಚಿದರು. ಭಾರತ ಈ ಅವಧಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಮೂರನೇ ಅವಧಿಯಲ್ಲಿ ಭಾರತ ಎಚ್ಚರಿಕೆಯಿಂದ ಆಟವಾಡಿ ಎದುರಾಳಿಗೆ ಗೋಲು ಬಾರಿಸಿದಂತೆ ತಡೆಯುವಲ್ಲಿ ಯಶಸ್ವಿಯಾಯಿತು. ನಾಲ್ಕನೇ ಅವಧಿಯಲ್ಲೂ ಬೆಲ್ಜಿಯಂ ಗೋಲು ಬಾರಿಸುವ ಆಸೆ ಫಲಿಸಲಿಲ್ಲ. ಪರಿಣಾಮ ಭಾರತ ಉಪಾಂತ್ಯಕ್ಕೆ ಪ್ರವೇಶಿಸಿತು.
ಮೊದಲ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಜರ್ಮನಿ ಪೆನಾಲ್ಟಿ ಶೂಟೌಟ್ ವರೆಗೂ ನಡೆದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲು ಗಳನ್ನು ಬಾರಿಸಿದ್ದವು. ಪೆನಾಲ್ಟಿ ಶೂಟೌಟ್ ನಲ್ಲಿ ಜರ್ಮನಿ 3, ಸ್ಪೇನ್ 1 ಗೋಲು ಬಾರಿಸಿತು.
ಎರಡನೇ ಕ್ವಾರ್ಟರ್ ಫೈನಲ್ಸ್ ನಲ್ಲಿ ಅರ್ಜೆಂಟೀನಾ 2-1 ರಿಂದ ನೆದರ್ಲ್ಯಾಂಡ್ ತಂಡವನ್ನು, ಫ್ರಾನ್ಸ್ 4-0ಯಿಂದ ಮಲೇಷ್ಯಾ ತಂಡವನ್ನು ಮಣಿಸಿ ಮುಂದಿನ ಹಂತ ಪ್ರವೇಶಿಸಿದವು.